ಹನಿಟ್ರ್ಯಾಪ್ ಗೆ ಸಿಲುಕಿದ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ: ಪ್ರಕರಣ ದಾಖಲು

ಹೊಸದಿಗಂತ ವರದಿ, ತುಮಕೂರು ಜಿಲ್ಲೆ ( ಗುಬ್ಬಿ):

ಹನಿಟ್ರ್ಯಾಪ್ ನಲ್ಲಿ ಲಲನೆಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಬ್ಲ್ಯಾಕ್ ಮೇಲ್ ಗೆ ಒಳಗಾದ ಪಪಂ ಮಾಜಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಬೆದರಿಕೆಗೆ ಹೆದರಿ ಲಕ್ಷಾಂತರ ರೂಗಳ ದಂಡ ತೆತ್ತುವ ಮುನ್ನ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳೆದ 45 ದಿನಗಳಿಂದ ನಡೆದ ಈ ಹೈಡ್ರಾಮಾ ಫೇಸ್ ಬುಕ್ ಮೂಲಕ ಲಲನೆಯೊಬ್ಬಳ ಸ್ನೇಹ ಬೆಳೆಸಿ ದಿನ ಕಳೆದಂತೆ ಹನಿ ಟ್ರ್ಯಾಪ್ ಗೆ ಸಿಲುಕಿದ ಪಟ್ಟಣ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ ಬರೋಬ್ಬರಿ 20 ಲಕ್ಷ ರೂಗಳ ಹಣದ ಬೇಡಿಕೆಗೆ ಹೆದರಿ ಗುಬ್ಬಿ ಪೊಲೀಸರ ಮೊರೆಹೋಗಿದ್ದಾರೆ.

ಫೇಸ್ ಬುಕ್ ನಲ್ಲಿ ಸ್ನೇಹ ಬೆಳೆದ ನಂತರ ಹಾಯ್, ಬಾಯ್, ಗುಡ್ ಮಾರ್ನಿಂಗ್, ಅಂತೆಲ್ಲ ಬೆಳೆದ ಸ್ನೇಹ ಸಲುಗೆ ಮಿತಿ ಮೀರಿ ವಿಡಿಯೋ ಕಾಲಿಂಗ್ ಮಾಡಿ ಮಾತನಾಡುವ ಘಟ್ಟ ತಲುಪಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆ ಮಹಿಳೆ ಹಲವು ಕಡೆ ಬಲವಂತವಾಗಿ ಕರೆಸಿಕೊಂಡು ಮದುವೆಯಾಗುವಂತೆ ಒತ್ತಾಯಿಸುತ್ತಿದಳು ಎನ್ನಲಾಗಿದೆ.

ತಿಪಟೂರು, ದೊಡ್ಡಬಳ್ಳಾಪುರ, ನೆಲಮಂಗಲ ಹೀಗೆ ನಾನಾ ಕಡೆ ಕರೆದು ಪ್ರೀತಿಸುತ್ತಿದ್ದೇನೆ ನನ್ನನ್ನು ಮದುವೆ ಮಾಡಿಕೊಳ್ಳಿ ಎಂದು ಒತ್ತಡ ಹಾಕಿ ಇದಕ್ಕೆ ಒಪ್ಪದಿದ್ದ ಕಾರಣ ಸ್ನೇಹಿತರೊಂದಿಗೆ ಸೇರಿ ಅವಳ ಜೊತೆಗಿನ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಹೆದರಿಸಿ ಹಣದ ಬೇಡಿಕೆ ಇಟ್ಟಿದ್ದಾಳೆ ಎಂಬುದು ಮಾಜಿ ಅಧ್ಯಕ್ಷರ ಗಂಭೀರ ಆರೋಪವಾಗಿದೆ.

ದೂರು ಅರ್ಜಿ ಹೊರತಾಗಿ ಕೆಲ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹಲವು ಬಿಸಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಮುಖಂಡ ಅಣ್ಣಪ್ಪಸ್ವಾಮಿ ಬ್ಲ್ಯಾಕ್ ಮೇಲರ್ ಮಹಿಳೆಯ ಗೆಳೆತನ ನಂತರ ಭೇಟಿ, ದಿಢೀರ್ ಪ್ರೇಮ, ಆಮೇಲೆ ಅಲ್ಲಲ್ಲಿ ಮೀಟಿಂಗ್ ಮಾಡಿಕೊಂಡು ಒಂದು ಕಡೆ ಸೇರೋದು ಈಗೆಲ್ಲಾ ನಡೆಯುತ್ತಿದ್ದ ಸಲುಗೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಜೊತೆ ಮತ್ತೊಬ್ಬ ಮಹಿಳೆಯ ಹೆಸರು ತಳುಕು ಹಾಕಿಕೊಂಡಿದೆ.

ಬೆಂಗಳೂರು ಕಡೆಗೆ ತೆರಳಲು ಹೇಳಿ ದೊಡ್ಡಬಳ್ಳಾಪುರ ಕಡೆ ಕರೆದುಕೊಂಡು ಹೋದ ಮಹಿಳೆ ದಾರಿಯುದ್ಧಕ್ಕೂ ಬೆದರಿಕೆ ಹಾಕಿ ಸಾಮಾಜಿಕ ಜಾಲ ತಾಣಗಳಲ್ಲಿ ಪೋಟೋ ವಿಡಿಯೋ ವೈರಲ್ ಮಾಡಿ ಮಾನ ಮರ್ಯಾದೆ ತೆಗೆಯುವ ಬೆದರಿಕೆಯಲ್ಲೇ ಹೊಟೇಲ್ ರೂಂ ನಲ್ಲಿ ಇಬ್ಬರು ಯುವಕರನ್ನು ಕರೆಸಿ ಬೆದರಿಕೆ ಹಾಕಿ ಕೊನೆಗೆ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ದೂರು ಉಲ್ಲೇಖ ಮಾಡಿದ್ದಾರೆ.

ದೂರು ಆಧರಿಸಿ ಗುಬ್ಬಿ ಪೊಲೀಸರು ಪ್ರಕರಣ ದಾಖಲಾಗಿಸಿ ಈ ಸಂಬಂಧ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದಾರೆ. ಮಹಿಳೆಯರ ಜೊತೆ ಸೇರಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಗುಬ್ಬಿ ಪಟ್ಟಣದ ಯುವಕ ಭರತ್ ಮತ್ತು ಬಿಲ್ಲೇಪಾಳ್ಯ ಬಸವರಾಜು ಎಂಬುವರ ಸೆರೆಗೆ ತಂಡ ರಚಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!