ಹೊಸದಿಗಂತ ವರದಿ, ಮಂಗಳೂರು:
ಬಿರು ಬಿಸಿಲ ನಡುವೆ ಪುಟಾಣಿ ಮಕ್ಕಳನ್ನು ಹಿಡಿದು ಭಿಕ್ಷಾಟಣೆ ಹೆಚ್ಚುತ್ತಿರುವ ಕುರಿತಂತೆ ‘ಹೊಸ ದಿಗಂತ’ ಶುಕ್ರವಾರ ಸಚಿತ್ರ ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತ ಸಂಬಂಧಪಟ್ಟ ಇಲಾಖೆಗಳು ಮಕ್ಕಳ ರಕ್ಷಣೆಯ ಕಾರ್ಯಾಚರಣೆಗಿಳಿದಿವೆ.
ಶುಕ್ರವಾರ ಸತತ ಕಾರ್ಯಾಚರಣೆ ಬಳಿಕ ೪ ಮಕ್ಕಳು ಮತ್ತು ಮೂವರು ತಾಯಂದಿರನ್ನು ರಕ್ಷಣೆ ಮಾಡಲಾಗಿದೆ. ಆದರೆ ಸಂಜೆಯ ವೇಳೆಗೆ ಪಿವಿಎಸ್ ವೃತ್ತದಲ್ಲಿ ಮತ್ತೊಂದು ತಂಡ ಎಳೆಯ ಮಕ್ಕಳನ್ನು ಹಿಡಿದುಕೊಂಡು ಭಿಕ್ಷಾಟಣೆ ನಡೆಸುತ್ತಿದ್ದುದು ಕಂಡು ಬಂದಿದೆ. ಅನ್ಯ ರಾಜ್ಯಗಳ ಮಂದಿ ಇಲ್ಲಿಗೆ ಬಂದು ಭಿಕ್ಷಾಟಣೆಗಿಳಿದಿರುವುದು ಕಂಡುಬರುತ್ತಿದ್ದು, ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಕ್ಕಳ ಸಹಾಯವಾಣಿ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಮಂಗಳೂರಿನ ಸ್ಟೇಟ್ ಬ್ಯಾಂಕ್ ಪರಿಸರ, ಬಸ್ ನಿಲ್ದಾಣ, ಕಂಕನಾಡಿ, ಪಂಪ್‌ವೆಲ್ ವೃತ್ತ, ಕುದ್ರೋಳಿ, ರಥಬೀದಿ, ಕೆಪಿಟಿ ಸ್ಥಳಗಳಲ್ಲಿ ಕಾಯ್ಯಾಚರಣೆ ನಡೆಸಿ ಭಿಕ್ಷಾಟನೆಯಲ್ಲಿ ತೊಡಗಿದ್ದ ೩ ತಾಯಂದಿರು ಮತ್ತು ೪ ಮಕ್ಕಳನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಿಳಿಸಿದೆ.
ಮಕ್ಕಳನ್ನು ಹಿಡಿದು ಭಿಕ್ಷಾಟಣೆ ನಡೆಸುವವರ ವಿರುದ್ಧ ಇಲಾಖೆ ಕೊನೆಗೂ ಕಾರ್ಯಾಚರಣೆಗಿಳಿದಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನಗರದಲ್ಲಿ ಭಿಕ್ಷಾಟಣೆ ದಂಧೆ ಹೆಚ್ಚುತ್ತಿರುವ ಕುರಿತಂತೆ ಮತ್ತು ಪುಟ್ಟ ಕಂದಮ್ಮಗಳನ್ನು ಹಿಡಿದುಕೊಂಡು ಭಿಕ್ಷಾಟಣೆ ನಡೆಸುತ್ತಿರುವ ಕುರಿತಂತೆ ‘ಹೊಸ ದಿಗಂತ’ ಶುಕ್ರವಾರ ‘ಹೀಟ್ ವೇವ್‌ನಲ್ಲಿ ಕಮರುತ್ತಿದೆ ಜೀವ ‘ಕಣ್ಬಿಟ್ಟು ನೋಡಿ ಕಂದಮ್ಮಗಳ ಸ್ಥಿತಿ’ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಿತ್ತು. ಈ ವರದಿ ಸಖತ್ ವೈರಲ್ ಕೂಡ ಆಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.
ವರದಿ ಪ್ರಕಟವಾದ ಬೆನ್ನಲ್ಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತುರ್ತು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಇದರಿಂದಾಗಿ ಒಂದಷ್ಟು ಮಕ್ಕಳ ರಕ್ಷಣೆಯಾಗಿದೆ. ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುವ ಮೂಲಕ ಭಿಕ್ಷಾಟಣೆ ದಂಧೆಗೆ ಕಡಿವಾಣ ಹಾಕಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
ಭಿಕ್ಷಾಟಣೆಗೆ ನಿಷೇಧವಿದ್ದರೂ ದಿನೇ ದಿನೇ ಈ ದಂಧೆ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳನ್ನು, ಬಾಲೆಯರನ್ನು ಮುಂದಿಟ್ಟುಕೊಂಡು ದಂಧೆ ನಡೆಸುವ ಮಾಫಿಯಾ ಇದರ ಹಿಂದಿದ್ದು, ಇಲಾಖೆ ಸಮಗ್ರ ತನಿಖೆ ನಡೆಸಿದಲ್ಲಿ ಸತ್ಯಾಂಶ ಬಯಲಾಗಲಿದೆ. ಜೊತೆಗೆ ಯಾವ ತಪ್ಪೂ ಮಾಡದ ಕಂದಮ್ಮಗಳಿಗೆ ನ್ಯಾಯ ಸಿಕ್ಕಾಂತಗಲಿದೆ.
ಅಮಲಿನಲ್ಲಿರುವ ಮಗು
ಗರ್ಭಿಣಿಯರು, ಮಹಿಳೆಯರು, ಬಾಲೆಯರು, ಮಕ್ಕಳನ್ನು ಹಿಡಿದುಕೊಂಡು ಭಿಕ್ಷಾಟಣೆ ನಡೆಸುವುದು ಕಂಡುಬರುತ್ತಿದೆ. ಎಳೆಯ ಮಕ್ಕಳಿಗೆ ಅಮಲು ಪದಾರ್ಥ ನೀಡಿ ನಿದ್ರೆಗೆ ಜಾರುವಂತೆ ಮಾಡಿ ಭಿಕ್ಷಾಟಣೆ ನಡೆಸುವ ಬಗ್ಗೆಯೂ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಾಚರಣೆ ನಡೆಸುವ ಅಧಿಕಾರಿಗಳ ತಂಡ ಈ ಬಗ್ಗೆಯೂ ಹೆಚ್ಚು ಆಸ್ಥೆ ವಹಿಸಬೇಕಿದೆ.