ನೀರು ಕುಡಿದ ಪ್ಲಾಸ್ಟಿಕ್ ಬಾಟಲಿ ಎಲ್ಲೆಂದರಲ್ಲಿ ಎಸೆಯುವುದಕ್ಕೆ ಬಿತ್ತು ಕಡಿವಾಣ: ಹೊಸ ರೂಲ್ಸ್ ಜಾರಿ ತಂದ್ರು ಸಚಿವ ಖಂಡ್ರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀರು ಕುಡಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಲು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ ಖಂಡ್ರೆ ಮುಂದಾಗಿದ್ದು, ನೀರಿನ ಬಾಟಲಿ ಮಾರುವ ಮಳಿಗೆಗಳು ಕಡ್ಡಾಯವಾಗಿ ಖಾಲಿ ನೀರಿನ ಬಾಟಲಿಗೆ ಕನಿಷ್ಠ ಬೆಲೆ ನೀಡಿ ಮರು ಖರೀದಿಸುವಂತೆ ನಿಯಮ ರೂಪಿಸಲು ಸೂಚನೆ ನೀಡಿದ್ದಾರೆ.

ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಅವರು, ಬಾಟಲಿಗಳ ಮೂಲಕ ಕುಡಿಯುವ ನೀರನ್ನು ಮಾರಾಟ ಮಾಡುವ ಕಂಪನಿಗಳಿಗೆ ಆ ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿಯ ಜವಾಬ್ದಾರಿಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಖಾಲಿ ಬಾಟಲಿಗಳನ್ನು ಕನಿಷ್ಠ ದರ ನೀಡಿ ಮರಳಿ ಖರೀದಿಸುವಂತೆ ನಿಯಮ ರೂಪಿಸಿದಲ್ಲಿ ಪ್ಲಾಸ್ಟಿಕ್ ಬಾಟಲಿಯ ಹಾವಳಿ ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಣ್ಣಲ್ಲಿ ಮಣ್ಣಾಗದ, ನೀರಿನಲ್ಲಿ ಕರಗದ, ಸುಟ್ಟರೆ ಪ್ರಾಣವಾಯುವಿಗೆ ವಿಷಕಾರಿ ಅಂಶಗಳನ್ನು ಸೇರ್ಪಡೆ ಮಾಡುವ ಪ್ಲಾಸ್ಟಿಕ್ ಪ್ರಕೃತಿ ಪರಿಸರಕ್ಕೆ ಅಷ್ಟೇ ಅಲ್ಲದೆ ಜನ, ಜಾನುವಾರಗಳ ಆರೋಗ್ಯಕ್ಕೂ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿರ್ದಿಷ್ಟ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ದಾಸ್ತಾನು, ಮಾರಾಟ, ಬಳಕೆಯನ್ನು ನಿಷೇಧಿಸಿದ್ದು, ರಾಜ್ಯ ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ರೂಪಿಸಿದೆ. ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಪರಿಸರಕ್ಕೆ ಹಾನಿ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.

ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಬಿದ್ದು ಪರಿಸರ ಹಾಳು ಮಾಡುತ್ತಿರುವ, ಖನಿಜಯುಕ್ತ ನೀರಿನ ಬಾಟಲಿ (ಮಿನರಲ್ ವಾಟರ್ ಬಾಟಲ್ಸ್)ಗೆ ಕಡಿವಾಣ ಹಾಕಬೇಕಾಗಿದೆ. ಹೊಸ ನೀರಿನ ಬಾಟಲಿ ಖರೀದಿಸಲು ಬರುವ ಗ್ರಾಹಕರಿಂದ ಬಾಟಲಿ ನೀರು ಮಾರುವ ಚಿಲ್ಲರೆ ಮಳಿಗೆಗಳು ಯಾವುದೇ ಕಂಪನಿಯ ನೀರಿನ ಬಾಟಲಿ ನೀಡಿದರೂ ಅದಕ್ಕೆ ಕನಿಷ್ಠ ಬೆಲೆ ನೀಡಿ ಅಷ್ಟು ದರ ಕಡಿತ ಮಾಡಿ ಹೊಸ ಬಾಟಲಿ ಮಾರಾಟ ಮಾಡುವಂತೆ ಮತ್ತು ಈ ರೀತಿ ಸಂಗ್ರಹಿಸಲಾದ ಖಾಲಿ ಬಾಟಲಿಗಳನ್ನು ನೀರು ಮಾರಾಟ ಮಾಡುವ ಕಂಪನಿಗಳೇ ಹಿಂಪಡೆದು, ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲು ಸೂಚಿಸಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!