ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 2020-ಜುಲೈ 2022ರ ನಡುವೆ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿರುವ ಭಾರತೀಯರ ಸಂಖ್ಯೆ ಬರೋಬ್ಬರಿ 28 ಲಕ್ಷಕ್ಕೂ ಹೆಚ್ಚು!
ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಜನವರಿ 2020 ರಿಂದ ಜುಲೈ 2022ರ ಅವಧಿಯಲ್ಲಿ 28 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಕ್ಕಾಗಿ ದೇಶ ತೊರೆದಿದ್ದಾರೆ. ಕೆಲಸದ ಉದ್ದೇಶಗಳಿಗಾಗಿ ವಿದೇಶಕ್ಕೆ ಹೋಗುವ ಭಾರತೀಯರನ್ನು ಕಂಡುಹಿಡಿಯಲು ಯಾವುದೇ ನಿರ್ದಿಷ್ಟ ಸೂಚ್ಯಂಕ ಇಲ್ಲ. ವೀಸಾ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗಿದೆ ಎಂದು ಲೋಕಸಭೆಗೆ ಲಿಖಿತ ಹೇಳಿಕೆ ನೀಡಿದೆ. ಅಲ್ಲದೇ, ಈ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, 2020ರಲ್ಲಿ ಸುಮಾರು 7.15 ಲಕ್ಷ, 2021ರಲ್ಲಿ 8.33 ಲಕ್ಷ ಹಾಗೂ ಪ್ರಸಕ್ತ ಜುಲೈ ಅಂತ್ಯದವರೆಗೆ 13.02 ಲಕ್ಷ ಭಾರತೀಯರು ಕೆಲಸಕ್ಕಾಗಿ ದೇಶ ತೊರೆದಿದ್ದಾರೆ ಎಂದು ತಿಳಿಸಿದೆ.