ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ಅಧಿವೇಶನದಲ್ಲಿ ನೀಟ್ (NEET) ವಿಚಾರವಾಗಿ ಕೋಲಾಹಲ ಎದ್ದು, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷದ ನಾಯಕರು ಸಭಾತ್ಯಾಗ ಮಾಡಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನೀಟ್ ವಿವಾದದ ಬಗ್ಗೆ ಚರ್ಚೆ ನಡೆಸಲು ಪ್ರತ್ಯೇಕ ಒಂದು ದಿನ ಮೀಸಲಿಡಬೇಕು ಎಂದು ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕರು ಬೇಡಿಕೆ ಮುಂಡಿಟ್ಟರು. ಆದರೆ ಸರ್ಕಾರ ಇದಕ್ಕೆ ಒಪ್ಪದೆ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಮುಂದುವರಿಸಲು ಮುಂದಾಯಿತು. ಇದರಿಂದ ಲೋಕಸಭೆಯಲ್ಲಿ ಕೋಲಾಹಲವೇ ಸೃಷ್ಟಿಯಾಯಿತು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ದೇಶಾದ್ಯಂತ ಸುಮಾರು 2 ಕೋಟಿ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ನೀಟ್ ವಿವಾದದ ಬಗ್ಗೆ ಚರ್ಚೆ ನಡೆಸಲು ಅವಕಾಶ ಒದಗಿಸಬೇಕು ಎಂದು ಪ್ರತಿಪಕ್ಷಗಳ ನಾಯಕ ರಾಹುಲ್ ಗಾಂಧಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಬಳಿ ಮನವಿ ಮಾಡಿದರು.
‘ನಾವು ನೀಟ್ ಬಗ್ಗೆ ಒಂದು ದಿನದ ಚರ್ಚೆ ನಡೆಸಲು ಆಗ್ರಹಿಸುತ್ತಿದ್ದೇವೆ. ಇದು ಒಂದು ಪ್ರಮುಖ ವಿಷಯವಾಗಿದ್ದು, ಎರಡು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. 70 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆಗೆ ನೀವು ಅವಕಾಶ ನೀಡಬೇಕು’ ಎಂದು ರಾಹುಲ್ ಗಾಂಧಿ ಹೇಳಿದರು.
ರಾಹುಲ್ ಗಾಂಧಿ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಸದನವು ವಂದನಾ ನಿರ್ಣಯವನ್ನು ಪೂರ್ಣಗೊಳಿಸುವವರೆಗೆ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.’ಸಂಸದನಾಗಿ ನನ್ನ ದಶಕಗಳ ಅನುಭವದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಸಮಯದಲ್ಲಿ ಬೇರೆ ಯಾವುದೇ ವಿಷಯವನ್ನು ಕೈಗೆತ್ತಿಕೊಂಡಿರುವುದನ್ನು ನೋಡಿಲ್ಲ. ವಂದನಾ ನಿರ್ಣಯವನ್ನು ಅಂಗೀಕರಿಸಿದ ನಂತರ ಇತರ ಸಮಸ್ಯೆಗಳನ್ನು ಎತ್ತಬಹುದು’ ಎಂದು ಅವರು ತಿಳಿಸಿದರು.
ಇಷ್ಟಕ್ಕೆ ತೃಪ್ತರಾಗದ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷದ ನಾಯಕರು ವಂದನಾ ನಿರ್ಣಯದ ಮೇಲಿನ ಚರ್ಚೆಯ ನಂತರ ನೀಟ್ ವಿಷಯವನ್ನು ಚರ್ಚಿಸಲಾಗುವುದು ಎಂದು ಸರ್ಕಾರ ಭರವಸೆ ನೀಡುವಂತೆ ಆಗ್ರಹಿಸಿದರು.
‘ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಬೇರೆ ಯಾವುದೇ ವಿಷಯವನ್ನು ತೆಗೆದುಕೊಳ್ಳುವ ಸಂಪ್ರದಾಯವಿಲ್ಲ ಮತ್ತು ಸದಸ್ಯರು ನೀಟ್ ಮೇಲಿನ ಚರ್ಚೆಗೆ ಪ್ರತ್ಯೇಕ ನೋಟಿಸ್ ನೀಡಬಹುದು’ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಬಳಿಕ ಅವರು ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಪ್ರಾರಂಭಿಸುವಂತೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರಿಗೆ ಸೂಚಿಸಿದರು. ಈ ವೇಳೆ ಪ್ರತಿಪಕ್ಷಗಳು ಸರ್ಕಾರ ಸ್ಪಷ್ಟ ಭರವಸೆ ನೀಡುವಂತೆ ಒತ್ತಾಯಿಸಿ ಸಭಾತ್ಯಾಗ ಮಾಡಿದವು.