ಮೈದುಂಬಿ ಹರಿಯುವ ಗಗನಚುಕ್ಕಿ ಜಲಪಾತ: ಅಪೂರ್ವ ಕ್ಷಣ ವೀಕ್ಷಿಸಲು ಪ್ರವಾಸಿಗರ ದಂಡು

ಹೊಸದಿಗಂತ ವರದಿ,ಮಳವಳ್ಳಿ :

ಕೃಷ್ಣರಾಜಸಾಗರ ಜಲಾಶಯದಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬಿಟ್ಟಿರುವುದರಿಂದ ಕೆಂಡದ ಜಲಪಾತ ಎಂದೇ ಖ್ಯಾತಿಯಾಗಿರುವ ಗಗನಚುಕ್ಕಿ ಜಲಪಾತದಲ್ಲಿ ನೊರೆ ಹಾಲಿನಂತೆ ಧುಮ್ಮಿಕ್ಕಿ ಹರಿಯುತ್ತಿರುವ ನೀರನ್ನು ವೀಕ್ಷಿಸಲು ಭಾನುವಾರ ಸಾವಿರಾರು ಪ್ರವಾಸಿಗರು ತಾಲೂಕಿನ ಬ್ಲ್ ಬಳಿಯ ಶಿವನಸಮುದ್ರಕ್ಕೆ ಆಗಮಿಸಿದ್ದರು.
ಕೆಆರ್‌ಎಸ್ ಅಣೆಕಟ್ಟೆ ಭರ್ತಿ ಹಂತಕ್ಕೆ ತಲುಪಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 50 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಇದರಿಂದ ಗಗನಚುಕ್ಕಿ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕಿ ಹರಿಯುವ ಮೂಲಕ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಕೆಆರ್‌ಎಸ್ ಜಲಾಶಯ 122.60 ಅಡಿ ತಲುಪಿರುವುದರಿಂದ ಜಲಾಶಯದಿಂದ 50 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಭಾನುವಾರ ರಜಾ ದಿನವಾಗಿದ್ದರಿಂದ ಕಾವೇರಿ ನದಿಗೆ ನೀರು ಬಿಟ್ಟ ವಿಷಯ ತಿಳಿದ ಮಂಡ್ಯ ಸೇರಿದಂತೆ ಬೆಂಗಳೂರು, ಮೈಸೂರು, ಚಾಮರಾಜನಗರ ಹಾಗೂ ಸುತ್ತಮುತ್ತಲ ಜಿಲ್ಲೆಗಳ ಸುಮಾರು 8 ಸಾವಿರಕ್ಕೂ ಅಧಿಕ ಪ್ರವಾಸಿಗರು ಗಗನಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ ನೊರೆಹಾಲಿನಂತೆ ನಾನೂರಕ್ಕೂ ಹೆಚ್ಚು ಅಡಿ ಎತ್ತರಿಂದ ಕಂದಕ್ಕೆ ಧುಮ್ಮಿಕ್ಕುವ ನೀರನ್ನು ನೋಡಿ ರೋಮಾಂಚನಗೊಂಡರು. ಈ ವೇಳೆ ಭೋರ್ಗರೆಯುವ ನೀರನ್ನು ನೋಡಿ ಬಂಡೆ ಮೇಲೆ ನಿಂತು ಸೆಲ್ಫಿತೆಗೆದುಕೊಂಡರು.
ಸೋಮವಾರದಿಂದ ಇನ್ನಷ್ಟು ಪ್ರಮಾಣದಲ್ಲಿ ಜಲಾಶಯದಿಂದ ನದಿಗೆ ಬಿಡುವುದರಿಂದ ಜಲಪಾತದ ರಮಣೀಯ ದೃಶ್ಯ ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. ಅಲ್ಲದೇ ಭರಚುಕ್ಕಿ ಜಲಪಾತವೂ ಕೂಡ ನೀರಿನಿಂದ ಕಂಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ದೃಶ್ಯ ಕಂಡು ಬಂತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!