ಹೊಸದಿಗಂತ ವರದಿ, ಶಿವಮೊಗ್ಗ:
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನಯಾನ ಸೇವೆ ಆರಂಭವಾಗುತ್ತಿದೆ. ಇದರಿಂದ ಶಿವಮೊಗ್ಗದ ಆಗಸದಲ್ಲಿ ಲೋಹದ ಹಕ್ಕಿಗಳ ಕಲರವವೇ ಮೂಡಿ ಬರಲಿದೆ.
ಶಿವಮೊಗ್ಗ ಏರ್‌ಪೋರ್ಟ್ ಕಾರ್ಯಾರಂಭ ಮಾಡಿ 45 ದಿನಗಳ ಬಳಿಕ ಮತ್ತೊಂದು ಸಿಹಿ ಸುದ್ದಿ ಇದಾಗಿದೆ. ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ಬೆಂಗಳೂರು-ಶಿವಮೊಗ್ಗ-ಬೆಂಗಳೂರು ಇಂಡಿಗೋ ವಿಮಾನದ ಜತೆಗೆ ಸ್ಟಾರ್ ಏರ್ ಲೈನ್ಸ್ ನವೆಂಬರ್ 17ರಿಂದ ಶಿವಮೊಗ್ಗದಿಂದ ಸೇವೆ ಆರಂಭಿಸುತ್ತಿದೆ. ಇದರೊಂದಿಗೆ ಶಿವಮೊಗ್ಗದಿಂದ ತಿರುಪತಿ, ಗೋವಾ ಹಾಗೂ ಹೈದರಾಬಾದ್ ನಡುವೆ ವಾರದ ಆರು ದಿನ ನೇರ ಸಂಪರ್ಕ ಸೇವೆ ಲಭ್ಯವಾಗಲಿದೆ. ನಗರದ ಶುಭಂ ಹೋಟೆಲ್ ಸಮೀಪ ಇರುವ ಬ್ಲೂಬೆಲ್ ಹಾಲಿಡೇಸ್‌ನಲ್ಲಿ ಸ್ಟಾರ್ ಏರ್‌ಲೈನ್ ಸೇವೆಯ ಟಿಕೇಟ್‌ಗಳನ್ನು ಬುಕಿಂಗ್ ಮಾಡಬಹುದಾಗಿದೆ. ಮಾಹಿತಿಗೆ ಮೊ: 8123002917, 9449502917 ರಲ್ಲಿ ಸಂಪರ್ಕಿಬಹುದು.
ಸ್ಟಾರ್ ಏರ್‌ಲೈನ್‌ನ ವೇಳಾಪಟ್ಟಿ ಹೀಗಿದೆ :
ಹೈದರಾಬಾದ್‌ನಿಂದ ಬೆಳಿಗ್ಗೆ 9.30ಕ್ಕೆ ಹೊರಡುವ ವಿಮಾನ ಬೆ.10.35ಕ್ಕೆ ಶಿವಮೊಗ್ಗ ತಲುಪಲಿದೆ. ಬೆ.11ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12ಕ್ಕೆ ತಿರುಪತಿ ತಲುಪಲಿದೆ. ಅದೇ ದಿನ ಮಧ್ಯಾಹ್ನ ತಿರುಪತಿಯಿಂದ 12.35ಕ್ಕೆ ಹೊರಡುವ ವಿಮಾನ ಶಿವಮೊಗ್ಗವನ್ನು ಮಧ್ಯಾಹ್ನ 1.40ಕ್ಕೆ ಬರಲಿದೆ.
ಮಧ್ಯಾಹ್ನ 1.55ಕ್ಕೆ ಶಿವಮೊಗ್ಗದಿಂದ ಹೊರಡುವ ವಿಮಾನ ಮಧ್ಯಾಹ್ನ 2.45ಕ್ಕೆ ಗೋವಾ(ಮೋಪಾ) ತಲುಪುತ್ತದೆ. ಗೋವಾದಿಂದ 3.15ಕ್ಕೆ ಹೊರಡುವ ವಿಮಾನವು ಶಿವಮೊಗ್ಗಕ್ಕೆ ಸಂಜೆ 4.05ಕ್ಕೆ ಬರಲಿದೆ. ಅಂತಿಮವಾಗಿ ಶಿವಮೊಗ್ಗದಿಂದ 4.30ಕ್ಕೆ ಹೊರಟು ಹೈದರಾಬಾದ್‌ಗೆ 5.30ಕ್ಕೆ ಹೋಗಿ ಸೇರಲಿದೆ.