ಊಟ ಸರಿಯಿಲ್ಲವೆಂದು ತಟ್ಟೆ ಸಮೇತ ರಸ್ತೆಗೆ ಬಂದು ಅತ್ತ ಕಾನ್ಸ್‌ಟೇಬಲ್:‌ ವೈರಲ್‌ ಆದ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಉತ್ತರ ಪ್ರದೇಶ ಮೂಲದ ಕಾನ್‌ಸ್ಟೇಬಲ್ ಒಬ್ಬರು ಊಟದ ತಟ್ಟೆ ಸಮೇತ ರಸ್ತೆಯಲ್ಲಿ ನಿಂತು ಅಳುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಫಿರೋಜಾಬಾದ್ ಜಿಲ್ಲೆಯಲ್ಲಿನ ಪೊಲೀಸ್ ಮೆಸ್‌ನಲ್ಲಿ ನೀಡಲಾಗುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿದ್ದು, ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸ್ ಪೇದೆ ಮನೋಜ್ ಕುಮಾರ್ ದೂರಿದರು.

ಮನೋಜ್ ಅವರ ತಟ್ಟೆಯಲ್ಲಿ ರೊಟ್ಟಿ, ದಾಲ್ ಮತ್ತು ಅನ್ನವಿತ್ತು. ಅಳುತ್ತಾ ನಿಂತಿದ್ದ ಕಾನ್‌ಸ್ಟೇಬಲ್‌ ಅನ್ನು ಹಿರಿಯ ಅಧಿಕಾರಿಯೊಬ್ಬರು ಮತ್ತೆ ಠಾಣೆಗೆ ಕರೆದುಕೊಂಡು ಹೋಗಲು ಯತ್ನಿಸಿದರಾದರೂ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ವರಿಷ್ಠರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮನೋಜ್ ಆಕ್ರೋಶ ವ್ಯಕ್ತಪಡಿಸಿದರು. ನನ್ನನ್ನು ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಮನೋಜ್ ದೂರಿದ್ದಾರೆ.

ಅಷ್ಟು ಗಂಟೆ ಡ್ಯೂಟಿ ಮುಗಿಸಿ ಬಂದ್ರೆ ನಮಗೆ ಸಿಗುವುದು ಇದೇ ಆಹಾರ.ಪೊಲೀಸರಿಗೆ ಸರಿಯಾದ ಆಹಾರ ನೀಡದಿದ್ದರೆ ಹೇಗೆ ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಈ ಆಹಾರವನ್ನು ಪ್ರಾಣಿಗಳು ಸಹ ಅದನ್ನು ತಿನ್ನುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಫಿರೋಜಾಬಾದ್ ಪೊಲೀಸರು ಕಾನ್‌ಸ್ಟೆಬಲ್‌ನ ವರ್ತನೆಯ ಬಗ್ಗೆ ಟ್ವೀಟ್ ಮಾಡಿದ್ದು, ಕಾನ್ ಸ್ಟೇಬಲ್ ಮನೋಜ್ ಕುಮಾರ್ ವಿರುದ್ಧ ಹಲವು ಬಾರಿ ಶಿಸ್ತು ಕ್ರಮ ಕೈಗೊಂಡಿರುವ ದಾಖಲೆಗಳಿವೆ ಎಂದರು. ಈ ಹಿಂದೆ ಅಕ್ರಮ ಹಾಗೂ ಇತರೆ ವಿಚಾರಗಳಲ್ಲಿ ಹದಿನೈದು ಬಾರಿ ಶಿಕ್ಷೆಗೆ ಗುರಿಯಾಗಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!