ಹೊಸದಿಗಂತ ಹುಬ್ಬಳ್ಳಿ:
ಅವಳಿ ನಗರದ ಸಮಗ್ರ ವಿಕಾಸ ಹಾಗೂ ಸ್ವಾವಲಂಬನೆಯ ಗುರಿಯೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು 1603.26 ಕೋಟಿ ರೂಪಾಯಿ ಮೊತ್ತದ ಬೃಹತ್ ಬಜೆಟ್ ಅನ್ನು ಸೋಮವಾರ ಮಂಡಿಸಿದೆ. ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ವಂಟಮುರಿ ಅವರು ಪಾಲಿಕೆ ಸಭಾಭವನದಲ್ಲಿ ಈ ಆಯವ್ಯಯವನ್ನು ಮಂಡಿಸಿದರು.

ಬಜೆಟ್ನ ಪ್ರಮುಖ ಅಂಶಗಳು:
ವಾರ್ಡ್ ಅಭಿವೃದ್ಧಿ: ಪಾಲಿಕೆ ವಾರ್ಡ್ಗಳ ಮೂಲಸೌಕರ್ಯಕ್ಕಾಗಿ 120 ಕೋಟಿ ರೂ. ಗಳ ಸದಸ್ಯರ ನಿಧಿ ಮೀಸಲು.
ಗ್ರಾಮೀಣಾಭಿವೃದ್ಧಿ: ಪಾಲಿಕೆ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಅಭಿವೃದ್ಧಿಗೆ 11 ಕೋಟಿ ರೂ. ಅನುದಾನ.
ಆಸ್ತಿ ಸಮೀಕ್ಷೆ: ಜಿಐಎಸ್ (GIS) ತಂತ್ರಜ್ಞಾನದ ಮೂಲಕ ಆಸ್ತಿ ಸಮೀಕ್ಷೆ ನಡೆಸಲು 23.50 ಕೋಟಿ ರೂ. ನಿಗದಿ.
ಚೆನ್ನಮ್ಮ ವೃತ್ತದ ನವೀಕರಣ: ಐತಿಹಾಸಿಕ ಕಿತ್ತೂರು ಚೆನ್ನಮ್ಮ ವೃತ್ತದ ಪುತ್ಥಳಿ ಮೇಲ್ದರ್ಜೆಗೇರಿಸಲು 5 ಕೋಟಿ ರೂ. ಮೀಸಲು.
ಆರೋಗ್ಯ ಕ್ಷೇತ್ರ: ಪಾಲಿಕೆ ಆಸ್ಪತ್ರೆಗಳ ನಿರ್ವಹಣೆಗೆ 5.42 ಕೋಟಿ ರೂ., ಧಾರವಾಡ ಆಸ್ಪತ್ರೆಗೆ 50 ಲಕ್ಷ ರೂ. ಹಾಗೂ ಮಹಿಳಾ ಸಾಂತ್ವನ ಕೇಂದ್ರ ಸ್ಥಾಪನೆಗೆ 50 ಲಕ್ಷ ರೂ. ನೀಡಲಾಗಿದೆ.
ಮಹಿಳಾ ಸಬಲೀಕರಣ: ಪ್ರತಿ ವಾರ್ಡ್ಗೆ ಒಂದರಂತೆ ‘ಪಿಂಕ್ ಇ-ಆಟೋ’ ವಿತರಿಸುವ ವಿನೂತನ ಯೋಜನೆ ಘೋಷಣೆ.
ಪರಿಸರ ಮತ್ತು ನೀರು: ಕೆರೆ ಹಾಗೂ ಉದ್ಯಾನವನಗಳ ಅಭಿವೃದ್ಧಿಗೆ ‘ಅಮೃತ’ ಯೋಜನೆಯಡಿ 28.75 ಕೋಟಿ ರೂ. ನಿರೀಕ್ಷಿಸಲಾಗಿದ್ದು, 24 ಗಂಟೆ ನಿರಂತರ ನೀರು ಸರಬರಾಜಿಗೆ ಒತ್ತು ನೀಡಲಾಗಿದೆ.
ಕಳೆದ ವರ್ಷ 186 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ್ದ ಪಾಲಿಕೆ, ಈ ಬಾರಿ 333 ಕೋಟಿ ರೂ. ಸಂಗ್ರಹದ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ.
“ಸ್ವಾವಲಂಬಿ ಹಾಗೂ ಸದೃಢ ಅಭಿವೃದ್ಧಿಯ ಪಾಲಿಕೆ” ಎಂಬ ಘೋಷವಾಕ್ಯದೊಂದಿಗೆ, ಆದಾಯ ಕ್ರೂಡೀಕರಣ, ಪೌರಕಾರ್ಮಿಕರ ಕಲ್ಯಾಣ ಮತ್ತು ಘನತ್ಯಾಜ್ಯ ನಿರ್ವಹಣೆಯನ್ನೊಳಗೊಂಡ ಸಪ್ತ ಸೂತ್ರಗಳನ್ನು ಜಾರಿಗೆ ತರಲು ಪಾಲಿಕೆ ಸಂಕಲ್ಪ ಮಾಡಿದೆ.



