ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ-3ಯಶಸ್ಸಿಗೆ ಕಾರಣರಾದ ಎಲ್ಲಾ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅಭಿನಂದನೆಯನ್ನು ತಿಳಿಸಿದರು. ಬಳಿಕ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ವಿಜ್ಞಾನಿಗಳನ್ನು ಭೇಟಿಯಾಗಿದ್ದಕ್ಕೆ ತಮಗಾದ ಸಂತೋಷವನ್ನು ವ್ಯಕ್ತಪಡಿಸಿದರು.
ʻನಿಮ್ಮನ್ನು ಭೇಟಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶ ಅಷ್ಟೇ ಅಲ್ಲದೆ ವಿಶ್ವವೇ ಹೆಮ್ಮೆಪಡುತ್ತಿದೆ ಎಂದರುʼ.
ಇಸ್ರೋ ವಿಜ್ಞಾನಿಗಳ ಸಾಧನೆ ನೆನೆದು ಭಾವುಕರಾದ ಪ್ರಧಾನಿ, ಪ್ರತಿಯೊಬ್ಬ ವಿಜ್ಞಾನಿಗೂ ನನ್ನಿಂದ ದೊಡ್ಡ ಸಲ್ಯೂಟ್ ಎಂದರು. ನಿಮ್ಮ ಧೈರ್ಯ, ಶಕ್ತಿ, ಶ್ರಮ, ಸಾಮರ್ಥ್ಯಕ್ಕೆ ನನ್ನ ನಮನಗಳನ್ನು ತಿಳಿಸುತ್ತಿದ್ದೇನೆ. ಸದ್ಯ ಭಾರತ ಚಂದ್ರನ ಮೇಲಿದೆ. ದೇಶದ ಘನತೆಯನ್ನು ಉತ್ತುಂಗಕ್ಕೇರಿಸಿದ್ದ ನಿಮಗೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು ಎಂದರು.
ನಿಮ್ಮೆಲ್ಲರ ಈ ಸಾಧನೆ ಇತರರಿಗೂ ಸ್ಪೂರ್ತಿದಾಯಕವಾಗಿದೆ. ನೀವೆಲ್ಲರೂ ಸೇರಿ ಭಾರತದ ಕನಸನ್ನು ನನಸು ಮಾಡಿದ್ದೀರಿ. ನಾನು ಚಂದ್ರಯಾನ ಯಾವುದೇ ಅಡೆತಡೆಯಿಲ್ಲದೆ ಚಂದ್ರನ ಮೇಲೆ ಕಾಲಿಟ್ಟಾಗ ವಿದೇಶದಲ್ಲಿದ್ದೆ. ಆದರೂ ನನ್ನ ಮನಸ್ಸು, ಮಿಡಿತ ಎಲ್ಲವೂ ಇಲ್ಲೇ..ನಿಮ್ಮೊಂದಿಗಿತ್ತು ಎಂದು ವಿಜ್ಞಾನಿಗಳನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
ನಿಮ್ಮ ಸಾಧನೆಯನ್ನು ಎಷ್ಟೇ ಹೊಗಳಿಕೆ ಮಾತುಗಳಾಡಿದರೂ ಅದು ಕಡಿಮೆಯೇ..ಚಂದ್ರನ ಮೇಲೆ ನಮ್ಮ ಪ್ರಜ್ಞಾನ್ ಪರಾಕ್ರಮ ಕಂಡು ಬಹಳ ಸಂತೋಷವಾಗಿದೆ. ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದ್ದಲ್ಲದೆ, ಎಲ್ಲರ ಚಿತ್ತ ಇದೀಗ ಭಾರತದತ್ತ ನೆಟ್ಟಿದೆ ಎಂದರು.