ದಿಗಂತ ವರದಿ ಅಂಕೋಲಾ:
ತಾಲೂಕಿನಲ್ಲಿ ಶಿರೂರು ಬಳಿ ಗುಡ್ಡ ಕುಸಿತದ ಘಟನೆ ಹಾಗೂ ದೇಶದ ವಿವಿಧೆಡೆ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪದ ಸಾವು ನೋವುಗಳಿಂದ ಜನ ಸಾಮಾನ್ಯರು ಭಯ ಭೀತರಾಗಿದ್ದು ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಪೋಟೋ, ವಿಡಿಯೋಗಳ ಹರಿದಾಟ ಸಹ ಹೆಚ್ಚಿದೆ.
ಕುಮಟಾ ತಾಲೂಕಿನ ಮಿರ್ಜಾನ್ ಬಳಿ ರೈಲ್ವೆ ಹಳಿಯ ಕೆಳಗಿನ ಮಣ್ಣು ಕುಸಿದು ಹೋಗಿದೆ ಎನ್ನುವ ಭಯಾನಕ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಹರಿದಾಡಿ ಜನರ ಆತಂಕಕ್ಕೆ ಕಾರಣವಾಗಿದೆ.
ರೈಲ್ವೆ ಹಳಿಯ ಅಡಿಯಲ್ಲಿ ಮಣ್ಣು ಕೊಚ್ಚಿ ಹೋಗಿ ಹಳಿಗಳ ಕೆಳಗೆ ಭಾರೀ ವೇಗದಲ್ಲಿ ನೀರು ಹರಿಯುತ್ತಿರುವ ವಿಡಿಯೋ ತುಣುಕು ಹರಿ ಬಿಟ್ಟು ಮಿರ್ಜಾನ್ ಬಳಿ ಘಟನೆ ಸಂಭವಿಸಿದೆ, ಇದೇ ಮಾರ್ಗದಲ್ಲಿ ರೈಲು ಬರುತ್ತಿದ್ದು ಕೂಡಲೇ ರೈಲ್ವೆ ಇಲಾಖೆಗೆ ಮಾಹಿತಿ ನೀಡುವಂತೆ ಸಂದೇಶ ನೀಡಲಾಗಿದೆ.
ಈ ಕುರಿತು ಸಾಕಷ್ಟು ಜನರು ರೈಲ್ವೆ ನಿಲ್ದಾಣಗಳಿಗೆ ಕರೆ ಮಾಡಿದ್ದು ಆ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಿ ಬಿಡಲಾಗಿದೆ, ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.