MUST READ | ದೀಪಗಳಿಗೆ ಮುಗ್ಧತೆಯ ಬಣ್ಣ ಬಳಿದು ‘ವಿಶೇಷ’ವಾಗಿಸಿದ ನಿಜ’ಚೇತನ’ರು..

ಈ ಪುಟಾಣಿಗಳನ್ನೊಮ್ಮೆ ನೋಡಿ.. ತದೇಕಚಿತ್ತದಿಂದ ಏನನ್ನೋ ಮಾಡ್ತಿದ್ದಾರೆ, ಇವರು ಏನು ಮಾಡ್ತಿದ್ದಾರೆ? ಈ ಬಾರಿ ದೀಪಾವಳಿಯ ಮೆರುಗನ್ನು ಹೆಚ್ಚಿಸಿದೋದಕ್ಕೆ ಪುಟಾಣಿ ಕೈಗಳನ್ನು ಬಳಸಿ ಹಣತೆಗಳನ್ನು ಸಿದ್ಧಪಡಿಸ್ತಿದ್ದಾರೆ.

ಮಂಗಳೂರಿನ ಸೇವಾಭಾರತಿ ಸಂಸ್ಥೆ ನಿರ್ವಹಿಸುವ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳು ಬೆಳಕಿನ ಹಬ್ಬಕ್ಕಾಗಿ ತಮ್ಮದೇ ರೀತಿಯ, ತಮ್ಮದೇ ಶೈಲಿಯ ಹಣತೆಗಳನ್ನು ತಯಾರಿಸ್ತಿದ್ದಾರೆ.

ಹೇಗೆ ತಯಾರಿ?
ಸ್ಥಳೀಯವಾಗಿ ತಯಾರಾದ ಮಣ್ಣಿನ ಹಣತೆಗಳನ್ನು ಖರೀದಿ ಮಾಡಿ ಮಕ್ಕಳಿಗೆ ನೀಡಲಾಗಿದೆ. ಮಕ್ಕಳು ತಮ್ಮಿಷ್ಟದ ಬಣ್ಣವನ್ನು ಹಣತೆಗಳಿಗೆ ಹಚ್ಚಿದ್ದಾರೆ, ತಮ್ಮದೇ ಕ್ರಿಯಾಶೀಲತೆ ಬಳಸಿ, ಮುಗ್ಧತೆಯ ಚಿತ್ರಗಳಿಂದ ದೀಪವನ್ನು ಅಲಂಕರಿಸಿದ್ದಾರೆ.

30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೈಯಲ್ಲಿ ಬಣ್ಣದ ಬ್ರಶ್
ಈ ಹಣತೆಯನ್ನು ಸುಂದರವಾಗಿಸುವ ಪ್ರಕ್ರಿಯೆಯಲ್ಲಿ ಮೂವತ್ತಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿದ್ದಾರೆ. ವಿವಿಧ ಬಣ್ಣ, ವಿನ್ಯಾಸವನ್ನು ರಚಿಸಿ ಎರಡು ಸಾವಿರಕ್ಕೂ ಅಧಿಕ ದೀಪವನ್ನು ತಯಾರಿಸಲಾಗಿದೆ. ಇವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ.

ಮಕ್ಕಳಿಗೆ ಗುರುಗಳ ಸಾಥ್
ಸೃಜನಶೀಲ ಕೆಲಸಗಳೇ ಎಲ್ಲಕ್ಕಿಂತ ಕಷ್ಟವಾದ್ದು, ಆದರೆ ಶಿಕ್ಷಕರ ಸಾಥ್ ಸಿಕ್ಕರೆ ಅದೇ ಕೆಲಸ ಇನ್ನಷ್ಟು ಉತ್ತಮವಾಗುತ್ತದೆ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಶಿಕ್ಷಕರು ದೀಪಗಳ ಮೆರುಗು ಹೆಚ್ಚಿಸಿದ್ದಾರೆ.

ಹಣವನ್ನು ಏನು ಮಾಡ್ತಾರೆ?
ಮಕ್ಕಳು ಸುಂದರವಾಗಿ ತಯಾರಿಸಿರುವ ಈ ಹಣತೆಗಳನ್ನು ಆಸಕ್ತರಿಗೆ ಮಾರಾಟ ಮಾಡಲಾಗುತ್ತದೆ. ಮಾರಾಟ ಮಾಡಿದ ನಂತರ ಆ ಹಣವನ್ನು ಸಂಸ್ಥೆ ಏನು ಮಾಡುತ್ತದೆ ಎನ್ನುವ ಪ್ರಶ್ನೆ ಸಾಮಾನ್ಯ, ಈ ರೀತಿ ಬಂದ ಹಣವನ್ನು ಮಕ್ಕಳ ಭವಿಷ್ಯಕ್ಕಾಗಿ ಬಳಸಲಾಗುತ್ತದೆ. ಇನ್ನು ಈ ರೀತಿ ದೀಪಗಳನ್ನು ತಯರಾಗಿಸಿ ಮಾರುವ ಪ್ರಕ್ರಿಯೆಯಿಂದ ಮಕ್ಕಳು ಸ್ವ ಉದ್ಯೋಗದ ಬಗ್ಗೆಯೂ ಕಲಿಯುತ್ತಾರೆ ಎಂದು ಚೇತನಾ ಬಾಲವಿಕಾಸ ಕೇಂದ್ರದ ಮುಖ್ಯ ಶಿಕ್ಷಕಿ ಸುಪ್ರೀತಾ ಹೇಳಿದ್ದಾರೆ.

ಎಲ್ಲಿದೆ ಈ ಚೇತನಾ ಬಾಲ ವಿಕಾಸ ಕೇಂದ್ರ?
ಮಂಗಳೂರಿನ ಸೇವಾಭಾರತಿ ಸಂಸ್ಥೆ ನಿರ್ವಹಿಸುವ ಈ ಚೇತನಾ ಬಾಲ ವಿಕಾಸ ಕೇಂದ್ರವು ಮಂಗಳೂರು ನಗರದ ಕೊಡಿಯಾಲ್‌ಬೈಲ್‌ನ ವಿ.ಟಿ. ರಸ್ತೆಯಲ್ಲಿದೆ.

ನಿಮ್ಮ ಮಕ್ಕಳು ಮೊದಲ ಬಾರಿಗೆ ಬಿಡಿಸಿದ ಚಿತ್ರ ಹೇಗೇ ಇದ್ದರೂ ನಿಮ್ಮ ಪಾಲಿಗೆ ಅದು ಅತ್ಯಂತ ಅದ್ಭುತ ಚಿತ್ರವಾಗಿ ಕಾಣಿಸುತ್ತದೆ, ಅದೇ ರೀತಿ ಈ ಮಕ್ಕಳು ನಿಷ್ಕಲ್ಮಶವಾಗಿ ತಯಾರಿಸಿದ ಈ ದೀಪಗಳನ್ನು ಆಸಕ್ತಿಯಿದ್ದಲ್ಲಿ ಬಂದು ಖರೀದಿ ಮಾಡಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!