ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡಿನಿಂದ ನಾಡಿಗೆ ನುಗ್ಗಿದ ಆನೆಯೊಂದನ್ನು ಕೆಣಕಿ ಯುವಕನೊಬ್ಬ ಪೇಚಾಟಕ್ಕೆ ಸಿಲುಕಿದ ಘಟನೆ ಒಡಿಶಾದಲ್ಲಿ ನಡೆದಿದೆ. ಅಂಗುಲ್ ಜಿಲ್ಲೆಯಲ್ಲಿ ನಾಡಿಗೆ ಬಂದ ಕಾಡಾನೆಯೊಂದು ಎತ್ತ ಹೋಗಬೇಕೋ ತಿಳಿಯದೆ ಅಲ್ಲಲ್ಲೇ ತಿರುಗಾಡುತ್ತಿತ್ತು. ಇದನ್ನು ಕಂಡ ಗ್ರಾಮಸ್ಥರು ಆನೆಯನ್ನು ಓಡಿಸಲು ಪ್ರಯತ್ನಿಸುವ ವೇಳೆ ಯುವಕನೊಬ್ಬ ಅದರ ಬಾಲ ಹಿಡಿದು ಎಳೆದಿದ್ದಾನೆ. ಅಷ್ಟೇ ಕತೆ ಸಿಟ್ಟಿಗೆದ್ದ ಗಜರಾಜ ಯುವಕನನ್ನು ಅಟ್ಟಾಡಿಸಿದೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಮಾಡಿದ್ದುಣ್ಣೋ ಮಹರಾಯ ಎಂಬಂತೆ ಯುವಕ ಈಗ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾನೆ.
ಈ ವಿಡಿಯೋ ಅರಣ್ಯಾಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಗಂಭೀರವಾಗಿ ಪರಿಗಣಿಸಿ, ಯುವಕ ದಿನೇಶ್ ಸಾಹುನನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಈತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆನೆಯಿಂದ ತಪ್ಪಿಸಿಕೊಂಡರೂ ನಮ್ಮ ಕಾನೂನುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದರು.
ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಸಾಂತ್ ನಂದಾ ಹಂಚಿಕೊಂಡಿದ್ದು, ಕಾಡುಪ್ರಾಣಿಗಳ ಬಗೆಗೆ ಈ ತರಹದ ಧೋರಣೆ ತಕ್ಕುದ್ದಲ್ಲ, ಪ್ರಚೋದಿಸುವ ಕೆಲಸ ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು.
https://twitter.com/i/status/1721541132579197047