ಪ್ರಧಾನಿ ಮೋದಿ ಮಾತುಕತೆಯ ಪ್ರತಿಫಲ: ಒಂದು ದಶಕದಲ್ಲಿ ವಿದೇಶಿ ಜೈಲುಗಳಿಂದ 10,000 ಭಾರತೀಯರ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಿದೇಶಗಳ ಜೈಲಿನಲ್ಲಿ ಸೆರೆಯಾಗುವುದು ಅಂದರೆ ಅದು ನಿಜಕ್ಕೂ ನರಕಯಾತನೆ. ಈಗಾಗಲೇ ಸಾವಿರಾರು ಭಾರತೀಯರು ವಿದೇಶಗಳ ಜೈಲುಗಳಲ್ಲಿ ಇದ್ದಾರೆ. ಸರಿಯಾದ ಕಾನೂನು ಸೌಲಭ್ಯ ಸಿಗದ ಕಾರಣ ತಾಯ್ನಾಡಿಗೆ ಮರಳುವ ಅವರ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ಆದ್ರೆ 2014ರಲ್ಲಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲ್ಲಿಯವರೆಗೆ ಸುಮಾರು 10,000 ಭಾರತೀಯ ಪ್ರಜೆಗಳನ್ನು ವಿದೇಶಗಳ ಜೈಲುಗಳಿಂದ ಬಿಡುಗಡೆಗೊಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇತ್ತೀಚೆಗೆ ಯುಎಇಯ ಜೈಲಿನಲ್ಲಿದ್ದ 500 ಭಾರತೀಯ ಕೈದಿಗಳಿಗೆ ಕ್ಷಮಾದಾನ ನೀಡಲಾಗಿದ್ದು, ಇದು ಭಾರತ ಮತ್ತು ಯುಎಇ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಪ್ರಧಾನಿ ಮೋದಿ ಅವರು 2014 ರಿಂದ ರಾಜತಾಂತ್ರಿಕ ಮಾತುಕತೆಗಳು ಮತ್ತು ಉನ್ನತ ಮಟ್ಟದ ಮಧ್ಯಸ್ಥಿಕೆಗಳ ಮೂಲಕ ವಿದೇಶಗಳ ಜೈಲಿನಲ್ಲಿರುವ ಸುಮಾರು 10,000 ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಯಾವ ರಾಷ್ಟ್ರಗಳಿಂದ ಎಷ್ಟು ಭಾರತೀಯರ ಬಿಡುಗಡೆ?
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ): 2022 ಮತ್ತು 2025ರ ನಡುವೆ ಪ್ರತಿ ವರ್ಷ ನೂರಾರು ಭಾರತೀಯ ಕೈದಿಗಳಿಗೆ ಕ್ಷಮಾದಾನ ನೀಡಿದೆ. ಇದರಲ್ಲಿ ಕೆಲವರು ಪವಿತ್ರ ರಂಜಾನ್ ತಿಂಗಳಲ್ಲಿ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. 2022ರಲ್ಲಿ ಯುಎಇ 639 ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಿತ್ತು. 2023ರಲ್ಲಿ 700 ಮೀರಿದ್ದು, 2024ರಲ್ಲಿ 944 ಮತ್ತು 2025ರಲ್ಲಿ ಇದುವರೆಗೆ 500 ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ.

ಕತಾರ್: ಕೇಂದ್ರ ಸರ್ಕಾರಕ್ಕೆ ದೊರೆತ ಅತಿ ದೊಡ್ಡ ರಾಜತಾಂತ್ರಿಕ ಗೆಲುವಿನಲ್ಲಿ, ಕತಾರ್‌ನಲ್ಲಿ ಮರಣ ದಂಡನೆಗೆ ಒಳಗಾಗಿದ್ದ 8 ಭಾರತೀಯ ನೌಕಾಪಡೆ ಯೋಧರನ್ನು ಬಿಡುಗಡೆಗೊಳಿಸಲಾಗಿತ್ತು. ಇಇರಾನ್ – 2023 ಮತ್ತು 2024ರಲ್ಲಿ, ಇರಾನ್ ತನ್ನ ಜೈಲುಗಳಿಂದ ಕ್ರಮವಾಗಿ 43 ಮತ್ತು 77 ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡಿತ್ತು. 2023ರಲ್ಲಿ, 43 ಜನರನ್ನು ಬಿಡುಗಡೆ ಮಾಡಿದ್ದು, ಇವರಲ್ಲಿ 12 ಮೀನುಗಾರರು ಸೇರಿದ್ದರು.

ಪಾಕಿಸ್ತಾನ: ಅಲ್ಲಿನ ಸರ್ಕಾರದೊಂದಿಗೆ ನಿರಂತರವಾಗಿ ಸಂಪರ್ಕ ಬೆಳೆಸಿ 2014ರ ಬಳಿಕ ಸುಮಾರು 2,639 ಮೀನುಗಾರರು ಹಾಗೂ 71 ನಾಗರಿಕ ಕೈದಿಗಳನ್ನು ಬಿಡುಗಡೆ ಮಾಡುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.

ಬಹ್ರೇನ್: ಬಹ್ರೇನ್ ಸರ್ಕಾರವು 2019ರಲ್ಲಿ ಜೈಲಿನಲ್ಲಿದ್ದ 250 ಭಾರತೀಯರನ್ನು ಬಿಡುಗಡೆ ಮಾಡಲು ನಿರ್ಧರಿಸಿತ್ತು. ಆ ವರ್ಷ ಪ್ರಧಾನಿ ಮೋದಿ ಅವರ ‌ಬಹ್ರೇನ್ ಭೇಟಿಯ ಸಮಯದಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. 2017ರಲ್ಲಿ ಹಲವು ಸುತ್ತುಗಳ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿದ ನಂತರ 22 ಭಾರತೀಯ ಪ್ರಜೆಗಳನ್ನು ಬಿಡುಗಡೆ ಮಾಡಲು ಕುವೈತ್‌ ಎಮೀರ್‌ ಒಪ್ಪಿಕೊಂಡಿದ್ದರು. ಇದರೊಂದಿಗೆ 97 ಜನರಿಗೆ ನೀಡಲಾದ ಶಿಕ್ಷೆಯನ್ನು ಕಡಿಮೆ ಮಾಡಲಾಗಿತ್ತು.

ಶ್ರೀಲಂಕಾ: ಇಲ್ಲಿ ಮೀನುಗಾರರು ತಮಗರಿವಿಲ್ಲದೆಯೇ ಶ್ರೀಲಂಕಾ ಗಡಿಯನ್ನು ದಾಟಿದಾಗ ಅವರನ್ನು ಬಂಧಿಸಲಾಗುತ್ತಿತ್ತು. ಇಂತಹ ಸಂದರ್ಭಗಳಲ್ಲಿ ರಾಜತಾಂತ್ರಿಕ ಮಧ್ಯಸ್ಥಿಕೆಗಳ ಮೂಲಕ ಭಾರತವು ಈ ಮೀನುಗಾರರನ್ನು ಬಿಡುಗಡೆ ಮಾಡಲು ಶ್ರಮಿಸಿದೆ. 2014ರಿಂದ ಒಟ್ಟು 3,697 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಿಡುಗಡೆ ಮಾಡಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!