Friday, September 29, 2023

Latest Posts

ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಸರಿಯಿದೆ ಎಂದ ಕಂದಾಯ ಸಚಿವ

ಹೊಸದಿಗಂತ ವರದಿ ಹುಬ್ಬಳ್ಳಿ:

ಸರ್ಕಾರ ಹೆಚ್ಚಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿದರ ಸರಿಯಾಗಿದ್ದು, ಮಾರುಕಟ್ಟೆಗೆ ಮೌಲ್ಯಕ್ಕೆ ಹೋಲಿಸಿದರೆ ಬಹಳ ವ್ಯತ್ಯಾಸವಿದೆ. ಸದ್ಯ ಸರ್ಕಾರ ಕೈಗೊಂಡಿರುವ ಕ್ರಮದಿಂದ ಬ್ಲಾಕ್ ಮನಿ ತಪ್ಪಲಿದೆ. ಮಾರಾಟ ಮಾಡುವವರಿಗೆ ಆಗುವ ಅನ್ಯಾಯವೂ ಸಹ ತಪ್ಪಿಸಬಹುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ಶೇ.1000 ದಿಂದ 2000ರೂ. ವ್ಯತ್ಯಾಸವಿದೆ‌. ಕಳೆದ ಐದು ವರ್ಷಗಳಿಂದ ಇದು ಹೆಚ್ಚಳವಾಗಿರಲಿಲ್ಲ. ಹೆಚ್ಚಳದಿಂದ ಸರಕಾರಕ್ಕೆ ಆದಾಯ ಎನ್ನುವುದಕ್ಕಿಂತ ಮಿಗಿಲಾಗಿ ಆಗುತ್ತಿದ್ದ ಶೋಷಣೆ ತಡೆಯುವುದಾಗಿದೆ. ಮಾರುಕಟ್ಟೆ ದರ ಮೌಲ್ಯಕ್ಕೆ ಹೋಲಿಸಿದರೆ ಸರಕಾರದ ಮಾರ್ಗಸೂಚಿದರ ಸಾಕಷ್ಟು ಕಡಿಮೆಯಿತ್ತು. ಕಡಿಮೆಯಿದ್ದರೆ ಕೊಳ್ಳುವವರಿಗೆ ಅನುಕೂಲವಾಗಲಿದೆ ಎಂಬುದು ಸರಿಯಾದರೂ ಮಾರುಕಟ್ಟೆ ದರಕ್ಕೆ ಮಾರಾಟ ಮಾಡಿ ಉಳಿದ ಹಣವನ್ನು ನಗದು ರೀತಿಯಲ್ಲಿ ಪಡೆಯುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.

ಈಗಿರುವ ಮಾರುಕಟ್ಟೆ ದರಕ್ಕೆ ಮಾರ್ಗಸೂಚಿ ದರ ಸಾಧ್ಯವಿಲ್ಲ. ಕನಿಷ್ಠ ಪಕ್ಷ ಒಂದಿಷ್ಟು ವ್ಯತ್ಯಾಸ ಕಡಿಮೆ ಮಾಡಬಹುದಾಗಿದೆ‌. ಈ ಎಲ್ಲಾ ಅಂಶಗಳನ್ನು ನೋಡಿದಾಗ ಸರಕಾರ ಕೈಗೊಂಡಿರುವ ನಿರ್ಧಾರ ಸರಿಯಿದೆ. ಒಂದು ವೇಳೆ ಮಾರುಕಟ್ಟೆ ದರಕ್ಕಿಂತ ಹೆಚ್ಚಾಗಿದ್ದರೆ ಕಡಿಮೆ ಮಾಡಲು ಸೂಚಿಸಿದ್ದೇನೆ ಎಂದರು.

ಕೇಂದ್ರ ಬರಗಾಲ ಮಾನದಂಡ ಬದಲಾಯಿಸಲಿ:

ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ರಾಜ್ಯದಲ್ಲಿ ಬರಗಾಲ ಘೋಷಣೆ ಅಸಾಧ್ಯವಾಗಿದೆ. ಆದರಿಂದ ಮಾನದಂಡಗಳ ಬದಲಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಒಂದು ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಷ್ಟಾದರೂ ರಾಜ್ಯದಲ್ಲಿ 195 ತಾಲೂಕುಗಳ ಸಮೀಕ್ಷೆ ಮಾಡಿ ಬರ ಘೋಷಿಸಬಹುದು. ಅದರಲ್ಲಿ 162 ತೀವ್ರ ಬರಗಾಲ ತಾಲೂಕು, 34 ಸಾಧಾರಣ ಬರ ಪೀಡಿತ ತಾಲೂಕುಗಳಾಗಿದ್ದು, ಕೇಂದ್ರ ಸರ್ಕಾರದ ಮಾನದಂಡ ಪ್ರಕಾರ ಘೋಷಣೆ ಅಸಾಧ್ಯವಾದರೂ ಸಹ ವರದಿ ನೀಡಲಾಗಿದೆ.

ಅಷ್ಟೇ ಅಲ್ಲದೆ ತಿಂಗಳ ಕೊನೆಯಲ್ಲಿ ಮತ್ತೆ ಸರ್ವೇ ಪ್ರಕ್ರಿಯೆ ಆರಂಭಿಸಿ ಉಳಿದ ತಾಲೂಕಗಳನ್ನು ಸೇರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!