ಉಳ್ಳವರು ವನ್ಯಜೀವಿಯನ್ನೇ ಸಾಕುವರು, ಆದರೆ ಸಾಮಾನ್ಯರು ಕಾಡಲ್ಲಿ ದನ ಮೇಯಿಸಿದರೂ ಶಿಕ್ಷೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚೆಗೆ ರಾಜ್ಯದಲ್ಲಿ ವರದಿಯಾಗಿರುವ ಎರಡು ಘಟನೆಗಳು ರಾಜ್ಯ ಅರಣ್ಯ ಇಲಾಖೆಯ ಕಾರ್ಯವೈಖರಿಯ ಕುರಿತು ಜನಸಾಮಾನ್ಯರಲ್ಲಿ ಅನುಮಾನ ಹುಟ್ಟಲು ಕಾರಣವಾಗಿದೆ. ಒಂದೆಡೆ ಉಳ್ಳವರನ್ನು ರಕ್ಷಿಸುತ್ತ ಇನ್ನೊಂದೆಡೆ ಇಲ್ಲದವರ ಶೋಷಣೆಗೆ ಅರಣ್ಯ ಇಲಾಖೆ ಮುಂದಾಗಿರುವುದು ಜನಸಾಮಾನ್ಯರು ಇಲಾಖೆಯನ್ನು ದೂರುವುದಕ್ಕೆ ಪುಷ್ಟಿ ನೀಡುತ್ತಿದೆ. ಆ ಎರಡು ಘಟನೆಗಳ ಬಗ್ಗೆ ಗಮನಹರಿಸಬೇಕೆಂದರೆ ಮೊದಲನೇಯದು ದಾವಣಗೆರೆಯ ಮಾಜಿ ಸಚಿವರ ಫಾರ್ಮ್‌ ಹೌಸ್‌ ನಲ್ಲಿ ವನ್ಯಮೃಗಗಳು ಪತ್ತೆಯಾಗಿರುವುದು. ವನ್ಯಮೃಗಗಳಷ್ಟೇ ಅಲ್ಲದೆ ಅನೇಕ ಕಾಡು ಪ್ರಾಣಿಗಳ ಚರ್ಮ,ಮೂಳೆಗಳೂ ಪತ್ತೆಯಾಗಿವೆ ಎಂದು ವರದಿಯಾಗಿದೆ. ಇನ್ನೊಂದು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಸಂರಕ್ಷಿತ ಅರಣ್ಯದ ಹೆಸರಿನಲ್ಲಿ ಸಣ್ಣ ಹಿಡುವಳಿದಾರರು, ಕೃಷಿಕರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದು. ಈ ಎರಡೂ ಘಟನೆಗಳಲ್ಲಿ ಅರಣ್ಯ ಇಲಾಖೆ ತೋರಿರುವ ತಾರತಮ್ಯದ ಧೋರಣೆಯು ಇಲಾಖೆಯ ಕುರಿತು ಅನುಮಾನಗಳೇಳಲು ಕಾರಣವಾಗಿದೆ.

ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವರಾದ ಎಸ್.ಎಸ್.‌ ಮಲ್ಲಿಕಾರ್ಜುನ ಅವರ ಒಡೆತನದ ಫಾರ್ಮ ಹೌಸ್‌ನಲ್ಲಿ ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿರೋ ಕೃಷ್ಣಮೃಗಗಳು, ಜಿಂಕೆಗಳು, ಕಾಡುಹಂದಿ ಮತ್ತು ಮುಂಗುಸಿ ಸೇರಿದಂತೆ ವನ್ಯಪ್ರಾಣಿಗಳು ಪತ್ತೆಯಾಗಿದ್ದವು. ಆದರೆ ಈ ಕುರಿತು ನ್ಯಾಯಾಲಯಕ್ಕೆ ದೂರುಸಲ್ಲಿಸುವ ವೇಳೆ ಮಾಜಿ ಸಚಿವರ ಹೆಸರನ್ನು ಅರಣ್ಯಇಲಾಖೆ ಕೈಬಿಟ್ಟಿದೆ ಎಂದು ವರದಿಯಾಗಿದೆ. ಇದರಿಂದಾಗಿ ಅರಣ್ಯ ಇಲಾಖೆಯು ಮಾಜಿ ಸಚಿವರ ರಕ್ಷಣೆಗೆ ನಿಂತಿದೆಯೇ ಎಂಬಿತ್ಯಾದಿ ಪ್ರಶ್ನೆಗಳು ಎದ್ದಿವೆ. ಅಲ್ಲದೇ ಈ ಪ್ರಕರಣದ ಕುರಿತಾಗಿ ಅರಣ್ಯ ಇಲಾಖೆ ಯಾವುದೇ ಮಾಹಿತಿ ಹೊರಹಾಕುತ್ತಿಲ್ಲ. ರೈತರ ತೋಟಕ್ಕೆ ದಾಳಿಯಿಡುವ ಮಂಗಗಳನ್ನು ಬೆದರಿಸುವಾಗ ಅಕಸ್ಮಾತ್‌ ಮಂಗ ಮೃತಪಟ್ಟರೆ ಅದನ್ನೇ ದೊಡ್ಡದು ಮಾಡಿ ರೈತರನ್ನು ಬಂಧಿಸುವ ಅರಣ್ಯ ಇಲಾಖೆ ಈ ವಿಷಯದಲ್ಲೇಕೆ ಮೌನ ವಹಿಸಿದೆ ಎಂಬ ಕುರಿತು ಪ್ರಶ್ನೆಗಳು ಎದ್ದಿವೆ. ಆದರೆ ಮಾಜಿ ಸಚಿವರು ತಾವು ಪರವಾನಗಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ. ಆದರೆ ಇಲ್ಲಿ ಕಾಡುಪ್ರಾಣಿಗಳ ಚರ್ಮ, ಮೂಳೆಗಳೂ ಪತ್ತೆಯಾಗಿದೆ ಎನ್ನಲಾಗಿದೆ.

ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ವರದಿಯಾಗಿರುವ ಘಟನೆ ಇದಕ್ಕೆ ವಿರುದ್ಧವಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಜನರು ಸಣ್ಣಹಿಡುವಳಿದಾರರಾಗಿದ್ದು ಅವರಮೂಲ ಕಸುಬು ವ್ಯವಸಾಯವಾಗಿದೆ. ಆದರೆ ಅರಣ್ಯ ಇಲಾಖೆಯು ಈ ಪ್ರದೇಶದ ಜನರಿಗೆ ಅರಣ್ಯಸಂರಕ್ಷಣೆಯ ಹೆಸರಲ್ಲಿ ಹೆಚ್ಚಿನ ಜಾನುವಾರುಗಳನ್ನು ಸಾಕದಂತೆ ತಾಕೀತು ಮಾಡಿದೆ. ಮಲೈಮಹದೇಶ್ವರ ಬೆಟ್ಟವನ್ನು ಹುಲಿಸಂರಕ್ಷಿತ ಪ್ರದೇಶವೆಂದು ಘೋಷಿಸಿ ಜನರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಲಾಗಿದೆ. ಈ ಭಾಗದಲ್ಲಿ ಜನರ ಸಂಚಾರನಡೆಸದಂತೆ ಅರಣ್ಯ ಇಲಾಖೆಯವರು ನಿರ್ಬಂಧಿಸಿದ್ದಾರೆ. ಇದರಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳನ್ನು ಅರಣ್ಯಕ್ಕೆ ಬಿಡುವುದರಿಂದ ಅರಣ್ಯನಾಶವಾಗುತ್ತದೆಯೆಂದು ಹೆಚ್ಚಿನ ಜಾನುವಾರಗಳನ್ನು ಸಾಕದಂತೆ ಗ್ರಾಮಪಂಚಾಯತಿಗಳಲ್ಲಿ ನೋಟೀಸ್‌ ಅಂಟಿಸುವ ಮೂಲಕ ರೈತರ ಶೋಷಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಎರಡು ಪ್ರತ್ಯೇಕ ಘಟನೆಗಳನ್ನು ಗಮನಿಸಿದರೆ ಅರಣ್ಯ ಇಲಾಖೆಯು ʼಡಬಲ್‌ ಸ್ಟ್ಯಾಂಡ್ʼ ನಿಲುವು ತಳೆದಿದೆಯೇ ಎಂಬ ಕುರಿತು ಅನುಮಾನ ಮೂಡುತ್ತದೆ. ಒಂದೆಡೆ ವನ್ಯಜೀವಿಗಳು ಪತ್ತೆಯಾದ ಪ್ರಕರಣದಲ್ಲಿ ಅರಣ್ಯ ಇಲಾಖೆ ತಳೆದಿರುವ ನಿಲುವಿಗೂ ಮಲೈಮಹದೇಶ್ವರ ಬೆಟ್ಟದಲ್ಲಿ ರೈತರ ಶೋಷಣೆಗೆ ಮುಂದಾಗಿರುವುದಕ್ಕೂ ಒಂದಕ್ಕೊಂದು ತಾಳೆಯಾಗುವುದಿಲ್ಲ. ಅರಣ್ಯ ಇಲಾಖೆಯು ಉಳ್ಳವರಿಗೊಂದು ಎಂಬನೀತಿ ಅನುಸರಿಸುತ್ತಿದೆಯೇ ಎಂಬ ಕುರಿತು ಪ್ರಶ್ನೆಗಳು ಹುಟ್ಟುವುದಕ್ಕೆ ಈ ಎರಡು ಘಟನೆಗಳು ಕಾರಣವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!