ಚೀನಿಯರೆದುರು ವೀರಾವೇಶದಿಂದ ಹೋರಾಡಿದ ʼಪರಮ ವೀರʼನ ಸಾಹಸಗಾಥೆ

– ಗಣೇಶ ಭಟ್, ಗೋಪಿನಮರಿ

ಸ್ವಾತಂತ್ರ್ಯಾನಂತರ ಭಾರತ ಅನೇಕ ಸೇನಾ ಕಾರ್ಯಾಚರಣೆಗಳನ್ನು ನಡೆಸಿ ವಿಜಯಶಾಲಿಯಾಗಿದೆಯಾದರೂ, ಮಿಲಿಟರಿ ಪರಿಭಾಷೆಯಲ್ಲಿ ವ್ಯಾಖ್ಯಾನಿಸಬಲ್ಲ 4 ‘ಯುದ್ಧ’ಗಳನ್ನು ಮಾಡಿದೆ. 7 ದೇಶಗಳೊಂದಿಗೆ ಗಡಿ ಹಂಚಿಕೊಳ್ಳುವ ಭಾರತದ ಸೀಮಾರೇಖೆಯಲ್ಲಿ ನೇರವಾಗಿ ಕಾದಾಟಕ್ಕೆ ಇಳಿದಿದ್ದು ಎರಡು ದೇಶಗಳೊಂದಿಗೆ ಮಾತ್ರ ಎನ್ನಬಹುದು. ಅದರಲ್ಲೊಂದು ಪಾಕಿಸ್ತಾನ, ಇನ್ನೊಂದು ಕಮ್ಯೂನಿಸ್ಟ್ ದೇಶವಾದ ಚೀನಾ. ಪಾಕಿಸ್ತಾನದೊಂದಿಗೆ ನಡೆಸಿದ ಯುದ್ಧಗಳಲ್ಲಿ ಭಾರತ ಅಭೂತಪೂರ್ವ ವಿಜಯವನ್ನು ಸಾಧಿಸಿದೆ. ಆದರೆ ಚೀನಾದೊಂದಿಗಿನ ಯುದ್ಧದಲ್ಲಿ ಮಾತ್ರ ಸೋಲೊಪ್ಪುವ ಹೀನಾಯ ಸ್ಥಿತಿ ಒದಗಿತ್ತು ಎಂಬುದು‌ ಭಾರತೀಯ ಸೇನಾ ಇತಿಹಾಸದಲ್ಲಿನ ಕಪ್ಪು ಚುಕ್ಕೆಯಾಗಿ ಉಳಿದುಕೊಂಡು ಬಿಟ್ಟಿದೆ. ಈ ಕುರಿತು ಬಹಳಷ್ಟು‌ ಜನ ವಿಶ್ಲೇಷಣೆ ಮಾಡುವುದೇನೆಂದರೆ, ಚೀನಾದೊಂದಿಗೆ ಸೋಲು ಒದಗಲು ಅಂದಿನ ಭಾರತದ ನಾಯಕತ್ವವೇ ಬಹುದೊಡ್ಡ ಕಾರಣ ಎಂದು. ಚೀನಾ ಯುದ್ಧ ಭಾರತದ ಇತಿಹಾಸದಲ್ಲೇ ಮರೆಯಬಾರದಂತಹದ್ದು. ಯಾಕೆಂದರೆ ಅಂದು ಭಾರತದ ನಾಯಕತ್ವವನ್ನು ಆವರಿಸಿಕೊಂಡಿದ್ದ ‘ಮೈ ಮರೆವಿನಿಂದಾಗಿ’ಯೇ ಆ ಯುದ್ಧದಲ್ಲಿ ಸೋಲೊಪ್ಪಬೇಕಾಯಿತು. ಚೀನಾದ ಕುರಿತು ಎಚ್ಚರಿಕೆ ವಹಿಸದೇ, ಗಡಿಯಲ್ಲಿ ಚೀನೀ ಸೈನಿಕರ ಚಲನವಲಗಳ ಕುರಿತಾಗಿ ತಲೆ ಕೆಡಿಸಿಕೊಳ್ಳದೇ ಸೇನೆಗೆ ಬಲತುಂಬದೇ, ಸಜ್ಜುಗೊಳಿಸದೇ..ಕೊನೆಗೆ ಶತ್ರುವು‌ ಇನ್ನೇನು ದಾಳಿ ಮಾಡುತ್ತಾನೆ ಎಂದಾಗ ಏಕಾಏಕಿ ಸೈನಿಕರನ್ನು ಅವರೆದುರು ನಿಲ್ಲಿಸಿ ಹೋರಾಡು ಎಂದರೆ ಆತನಾದರೂ ಹೋರಾಡಲು ಹೇಗೆ ಸಾಧ್ಯ..? ಆದರೂ ಭಾರತೀಯ ಸೈನಿಕರ ಸಾಮರ್ಥ್ಯ ಎಂಥಹದ್ದು ಎಂಬುದು ಅವರು ಅಂದು ನಡೆಸಿದ ಹೋರಾಟದಲ್ಲೇ ತಿಳಿಯುತ್ತದೆ. ಅನೇಕ ಸೈನಿಕರು ತನಗಿಂತ ಬಲಿಷ್ಟವಾಗಿದ್ದ ಚೀನಿ ಸೇನೆಯೆದುರು ವೀರಾವೇಶದಿಂದ ಹೋರಾಡಿದರು, ಜೀವ ತೆತ್ತರು. ಅಂತಹ ವೀರ ಯೋಧರ ಪೈಕಿ ಪರಮವೀರ ಚಕ್ರ ಪಡೆದ ‘ಕರ್ನಲ್ ಧನ್ ಸಿಂಗ್ ಥಾಪಾ’ ಅವರ ಹೋರಾಟ ಅಪ್ರತಿಮ ವಾದದ್ದು.

ಇವರು ಹುಟ್ಟಿದ್ದು 1928ರಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ. ಗೂರ್ಖಾ‌ ಸಮುದಾಯಕ್ಕೆ ಸೇರಿದವರಾದ್ದರಿಂದ ಹುಟ್ಟಿನಿಂದಲೇ ಸೈ‌ನಿಕನಿಗೆ ಇರಬಹುದಾದ ಎಲ್ಲ ಗುಣಗಳೀ ಮೈಗೂಡಿದ್ದವು. ನಂತರ 1949ರಂದು ಭಾರತೀಯ ಸೇನೆಗೆ ಸೇರಿದ ಇವರು ಭಾರತದ ಸೇನಾ ರೆಜಿಮೆಂಟುಗಳಲ್ಲೇ ಅತ್ಯಂತ ಪ್ರಸಿದ್ಧವಾಗಿರೋ ‘ಗೂರ್ಖಾ ರೆಜಿಮೆಂಟ್’ ನ ಭಾಗವಾಗುತ್ತಾರೆ. ನಂತರ 1962ರ ಹೊತ್ತಿಗೆ‌ ಚೀನೀ ಸೇನೆಯ ವಿರುದ್ಧ ಭಾರತವು ಕೈಗೊಂಡ ‘ಪಾರ್ವರ್ಡ್ ಪಾಲಿಸಿ’ಯ ಹಿನ್ನೆಲೆಯಲ್ಲಿ ಲಡಾಖಿನ ಪ್ರದೇಶದಲ್ಲಿ ಪಾರ್ವರ್ಡ್ ಪೋಸ್ಟ್ ಗಳನ್ನು ಸ್ಥಾಪಿಸುವ ಕಾರ್ಯದ ಭಾಗವಾಗಿ ಇವರ ತಂಡವು ಲಡಾಖಿನ ‘ಸಿರಿಜಾಪ್’ ನಲ್ಲಿ ರಕ್ಷಣೆಗೆಂದು ನಿಯೋಜಿಸಲ್ಪಡುತ್ತದೆ.

ಅತ್ತ ಚೀನೀ ಸೈನಿಕರು ಅಗತ್ಯ ರಸ್ತೆ, ಮೂಲಭೂತ ಸೌಕರ್ಯಗಳೊಂದಿಗೆ ಎಲ್ಲರೀತಿಯಿಂದಲೂ ಭಾರತದ ಮೇಲೆ ಎರಗಲು ಸಜ್ಜಾಗಿದ್ದರು. ಆದರೆ ಭಾರತದ ಯುದ್ಧಕ್ಕೆ ಇನ್ನೂ ಸಿದ್ಧವಾಗಿರಲೇ ಇಲ್ಲ. ನಮ್ಮ ನಾಯಕರೆನಿಸಿಕೊಂಡವರು ಅತಿದೊಡ್ಡ ಮೈಮರೆವಿನಲ್ಲಿದ್ದರು. ಕೊನೆಗೆ ಚೀನಾ ಯುದ್ಧವನ್ನು ಮಾಡಿಯೇ ಮಾಡುತ್ತದೆಯೆಂಬುದು ಸ್ಪಷ್ಟವಾದಾಗ‌ ಬೆಂಕಿ ಬಿದ್ದ ಮೇಲೆ ಬಾವಿ ತೋಡುವಂತೆ. ಇರುವುದರಲ್ಲಿಯೇ ಯುದ್ಧ ಮಾಡಿ ಎಂದು ಸೇನೆಯನ್ನು ಕಳಿಸಲಾಗಿತ್ತು.

ಚೀನಿ ಸೈನಿಕರು ಅತ್ಯಾಧುನಿಕ‌ ಶಸ್ತ್ರಾಸ್ತ್ರಗಳೊಂದಿಗೆ ಭಾರತದ ಮೇಲೆ ದಾಳಿ‌ ನಡೆಸಿದ್ದರು. ಅವರ ದಾಳಿಗೆ ಒಳಗಾದ ಅನೇಕ ಪ್ರದೇಶದಲ್ಲಿ ಪ್ಯಾಂಗೊಂಗ್ ನದಿಯ ಉತ್ತರಕ್ಕಿರುವ ‘ಸಿರಿಜಾಪ್’ ಕೂಡ ಒಂದು. ಚೀನೀ ಸೈನಿಕರ ಸಂಖ್ಯೆ ಸಾವಿರದ ಪ್ರಮಾಣದಲ್ಲಿತ್ತು. ಆದರೆ ಧನ್ ಸಿಂಹ್ ಥಾಪಾರ ಬಳಿಯಿದ್ದದ್ದು ಕೇವಲ 28 ಗೂರ್ಖಾ ಸೈನಿಕರು. ಆದರೆ ದಂಡೆತ್ತಿ‌ಬಂದ ಚೀನಾ‌ಸೈನಿಕರೆದುರು ಕೈಯೆತ್ತಿ ಶರಣಾಗುವ ಆಯ್ಕೆ ಮಾಡಿಕೊಳ್ಳದೇ, ‘ಜೈ ಮಹಾಕಾಳಿ, ಆಯೋ ಗೂರ್ಖಾಲಿ’ ಎಂಬ ತಮ್ಮ‌ರೆಜಿಮೆಂಟಿನ ಘೋಷವಾಕ್ಯವನ್ನು ಕೂಗುತ್ತ ಹೋರಾಟಕ್ಕಿಳಿದ ಥಾಪ ಶತ್ರುವಿಗೆ ಅಪಾರ ಹಾನಿಯುಂಟು ಮಾಡಿದರು.

ತಮ್ಮ ಬಳಿಯಿದ್ದ ಸೀಮಿತ ಮದ್ದುಗುಂಡುಗಳಿಂದ ಥಾಪಾ ನಡೆಸಿದ್ದ ದಾಳಿ ಹೇಗಿತ್ತು ಎಂದರೆ, ಅಪಾರ ಸಂಖ್ಯೆಯಲ್ಲಿದ್ದರೂ ಶತ್ರು‌ ಒಂದೇ ಸಲ ಮುಂದೆ ಬರಲು ಹೆದರಿದ್ದ. ಥಾಪಾ ಅವರ ಹೋರಾಟಕ್ಕೆ ಹೆದರಿ ಒಂದಲ್ಲ ಮೂರು ಬಾರಿ ದಾಳಿ ನಡೆಸಿ ಆ ನಂತರ ಸೋಲಿಸಿದ್ದ. ಚೀನಾದ ಶೆಲ್ ಬಾಂಬುಗಳ ಸುರಿಮಳೆಗೆ ಭಾರತೀಯ ಸೈನಿಕರು ಕತ್ತರಿಸಿ ಹೋಗಿದ್ದರು. ಬಹುತೇಕರು ಹುತಾತ್ಮರಾಗಿ ನೆಲಕ್ಕುರುಳಿದ್ದರು. ಆದರೆ ಅವರ ಮೃತದೇಹ ನೋಡಿ ಕೊರಗುತ್ತ ಕೂರದೇ ಥಾಪಾ ಇತರರನ್ನು ಹುರಿದುಂಬಿಸಿ ಯುದ್ಧ ನಡೆಸಿದ್ದರು. ಮದ್ದುಗುಂಡುಗಳು ಕಡಿಮೆಯಾದಾಗ ನೆಲಕ್ಕುರುಳಿದ್ದ ತನ್ನದೇ ಸೈನಿಕರ ಬಂದೂಕುಗಳನ್ನೆತ್ತಿಕೊಂಡು ಹೋರಾಟ ನಡೆಸಿದ್ದರು. ಪರಿಣಾಮ ಶತ್ರು ಸೈನ್ಯಕ್ಕೆ ಅಪಾರ ಹಾನಿಯಾಗಿತ್ತು. ಕೊನೆಗೆ ಶತ್ರುವು ಅಂತಿಮ ‘ಯುದ್ಧ ಟ್ಯಾಂಕರ್’ಗಳೊಂದಿಗೆ ದಾಳಿ ನಡೆಸಿದ್ದ. ಪರಿಣಾಮ ಥಾಪಾರ ವೀರಾವೇಶದ ಹೋರಾಟ ಸೋಲೋಪ್ಪಲೇ ಬೇಕಾಯಿತು. ಥಾಪಾ ಮತ್ತು ಅವರೊಟ್ಟಿಗಿದ್ದ ಕೆಲ ಸೈನಿಕರನ್ನು ‘ಯುದ್ಧ ಖೈದಿ’ಗಳಾಗಿ ಚೀನಾ ಸೆರೆ ಹಿಡಿದಿತ್ತು. ಭಾರತವು ಥಾಪಾ ಹುತಾತ್ಮ ರಾಗಿದ್ದಾರೆ ಎಂದೇ ಭಾವಿಸಿ ಅವರಿಗೆ ಅತ್ಯುನ್ನತ ಶೌರ್ಯ ಪ್ರಶಸ್ತಿ ಪರಮ ವೀರ ಚಕ್ರವನ್ನು ಕೊಟ್ಟು ಗೌರವಿಸಿತ್ತು.

ಯುದ್ಧಖೈದಿಯಾಗಿ ಬಂಧಿತರಾಗಿದ್ದ ಥಾಪಾರಿಗೆ ಚೀನಿ ಸೈನ್ಯವು ಅನೇಕ ತೊಂದರೆ ನೀಡಿತ್ತು. ಅವರು ಶತ್ರುಗಳಿಗೆ ನೀಡಿದ್ದ ಆಘಾತದ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷಯನ್ನೂ‌ ನೀಡಲಾಯಿತು. ಕೊನೆಗೆ 1963 ರಲ್ಲಿ ಬಿಡುಗಡೆ ಗೊಳಿಸಲಾಯಿತು. ಭಾರತಕ್ಕೆ ಹಿಂದಿರುಗಿದ ಥಾಪಾ ಸೇನೆಯಲ್ಲಿಯೇ ಮುಂದುವರೆದರು. ಲೆ.ಕರ್ನಲ್ ಆಗಿ ಅವರಿಗೆ ಭಡ್ತಿ ನೀಡಲಾಯಿತು. ಕೊನೆಗೆ ನಿವೃತ್ತಿಯ ನಂತರ ಅವರು ವಯೋಸಹಜವಾಗಿ 2005 ರಲ್ಲಿ ಸಾವನ್ನಪ್ಪಿದರು.

ಚೀನಾದೊಂದಿಗಿನ ಹೋರಾಟದಲ್ಲಿ ಸೋಲೊಪ್ಪಬೇಕಾಯಿತು ಎಂಬುದು ನಿಜವಾದರು. ಅಲ್ಲಿ ಸೋತಿದ್ದು ಭಾರತದ ನಾಯಕತ್ವವೇ ವಿನಃ ನಮ್ಮ ಸೈನಿಕರಾಗಿರಲಿಲ್ಲ. ಭಾರತದ ಮೈಮರೆವಿನ ನಾಯಕತ್ವವೇ ಸೈನಿಕನನ್ನು‌ ಶತ್ರುವಿನ ಎದುರು ದುರ್ಬಲವನ್ನಾಗಿಸಿತ್ತು. ಅದೇನೇ ಇರಲಿ ದೇಶದ ರಕ್ಷಣೆಯ ವಿಷಯದಲ್ಲಿ ನಮ್ಮ ಸೈನಿಕರ ಬದ್ಧತೆಯಲ್ಲಿ‌ ಲವಲೇಷದಷ್ಟೂ ಬದಲಾವಣೆಯಾಗುವುದಿಲ್ಲ ಎಂಬುದುದಕ್ಕೆ ಧನ್ ಸಿಂಹ್ ಥಾಪಾ ಉದಾಹರಣೆಯಾಗಿ ನಿಲ್ಲುತ್ತಾರೆ.

ಅವರ ಅಪ್ರತಿಮ ಹೋರಾಟವನ್ನು ಗೌರವಿಸಿ ಭಾರತೀಯ ಸೇನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿ ‘ಪರಮ ವೀರ ಚಕ್ರ’ವನ್ನು ನೀಡಿ ಗೌರವಿಸಲಾಗಿದೆ. ಇತ್ತೀಚೆಗಷ್ಟೇ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ಅವರ ಮಣಿಯದ ಹೋರಾಟವನ್ನು ಸದಾ ಸ್ಮರಿಸಲೇಬೇಕಾಗಿದ್ದು ನಮ್ಮೆಲ್ಲರ ಆದ್ಯ ಕರ್ತ್ಯವ್ಯಗಳಲ್ಲೊಂದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!