ಸ್ತಬ್ಧಚಿತ್ರ ವಿವಾದ; ಕೇರಳ -ವಿರೋಧ ಪಕ್ಷದವರಿಂದ ಅಪಪ್ರಚಾರ: ಕೇಂದ್ರ ಸಚಿವ ಜೋಶಿ

ಹೊಸ ದಿಗಂತ ವರದಿ, ಹುಬ್ಬಳ್ಳಿ:

ಗಣರಾಜೋತ್ಸವ ಪರೇಡ್‌ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರದ ನಿರಾಕರಿಸಿದೆ ಎಂದು ಕೇರಳ ಮತ್ತು ವಿರೋಧ ಪಕ್ಷದ ನಾಯಕರು ಸುಳ್ಳು ಹೇಳಿ ಜನಸಾಮಾನ್ಯರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಮಂಗಳವಾರ ನಗರದಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಾರಾಯಣ ಗುರುಗಳ ಸ್ಥಬ್ಧ ಚಿತ್ರ ತಿರಸ್ಕರಿಸಿಲ್ಲ. ಪ್ರತಿ ಮೂರು ವರ್ಷಕೊಂದು ಸಾರಿ ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿ ೩೭ ರಾಜ್ಯಗಳ ಮಹನಿಯರ ಗಣರಾಜೋತ್ಸವ ಪರೇಡ್‌ನಲ್ಲಿ ಸ್ತಬ್ಧ ಚಿತ್ರಗಳನ್ನು ಪ್ರದರ್ಶನಕ್ಕೆ ಪಡೆಯಲಾಗುತ್ತದೆ. ಇದನ್ನು ಮಾಡಲು ಯಾವುದೇ ಕಾನೂನು ಇಲ್ಲ. ಹಿಂದಿನಿಂದಲೂ ಮಾಡಿಕೊಂಡು ಬಂದ ಸಂಪ್ರದಾಯವಾಗಿದೆ. ಕೇರಳಾದವರು ಸಹ ನಾರಾಯಣ ಗುರುಗಳ ಸ್ತಬ್ಧಚಿತ್ರ ಕಳುಹಿಸಿದ್ದರು. ಅದರಲ್ಲಿ ದೇಶದ ಎಲ್ಲ ರಾಜ್ಯಗಳ ಸೇರಿ 12 ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿದೆ ಹೊರತು ನಾರಾಯಣ ಗುರುಗಳ ಚಿತ್ರ ಯಾವುದೇ ಕಾರಣಕ್ಕೂ ಕಡೆಗಣಿಸಿಲ್ಲ ಶಂಕರಾಚಾರ್ಯರ ಸ್ತಬ್ಧಚಿತ್ರ ನೀಡಿ ಎಂದು ಕೇರಳಾ ಸರ್ಕಾರಕ್ಕೆ ಸೂಚಿಸಿಲ್ಲ ಎಂದರು.
ಸಿದ್ದರಾಮಯ್ಯ ಸತ್ಯಾಸತ್ಯತೆ ಅರಿತು ಮಾತನಾಡಲಿ: ನಾರಾಯಣ ಗುರು ಹಾಗೂ ಶಂಕರಾಚಾರ್ಯರ ಇಬ್ಬರು ಸಮಾಜ ಸುಧಾರಣೆ ಮಾಡುವುದರಲ್ಲಿ ಮಹತ್ತರ ಪಾತ್ರವಹಿಸಿದವರು. ಇವರನ್ನು ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ಕಡೆಗಣಿಸುವುದಿಲ್ಲ. ಸಿದ್ದರಾಮಯ್ಯನವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ನಾರಾಯಣ ಗುರು ಅವರಿಗೆ ನಾವು ಅಪಮಾನ ಮಾಡಿದ್ದೇವೆ ಅನ್ನೊಂದಕ್ಕೆ ಏನು ಆಧಾರ ಇವರಲ್ಲಿದೆ. ಒಬ್ಬ ವಿರೋಧ ಪಕ್ಷದ ನಾಯಕನಾಗಿ ಈ ರೀತಿ ಆರೋಪ ಮಾಡುವುದು ಒಳ್ಳೆಯದಲ್ಲ ಎಂದು ಹರಿಹಾದರು.
ನಾರಾಯಣ ಗುರು ಅವರ ಪ್ರತಿಮೆ ಒಡೆದು ಹಾಕಿದ್ದ ಕಮ್ಯುನಿಸ್ಟ್ ಸರ್ಕಾರವೇ ಈ ವಿಷಯದಲ್ಲಿ ರಾಜಕಾರಣ ಮಾಡಲು ಮುಂದಾಗಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಈ ಬೆಳವಣಿಗೆ ಕುರಿತು ತಪ್ಪು ಹೇಳಿಕೆ ನೀಡುವುದಕ್ಕೂ ಮುಂಚೆ, ಸತ್ಯಾಸತ್ಯತೆ ಅರಿಯಬೇಕು ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಐದೂ ವರ್ಷ ರಾಜ್ಯದ ಸ್ತಬ್ಧಚಿತ್ರಗಳು ಗಣ ರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿರಲಿಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ, ವಿಶೇಷ ಸಂದರ್ಭದಲ್ಲಿ ಮಾತ್ರ ಆ ರೀತಿ ಅವಕಾಶ ನೀಡಲಾಗುತ್ತದೆ ಎಂದು ಜಾರಿಕೊಂಡರು.
ನಾಲ್ಕು ಕಡೆ ಬಿಜೆಪಿ ಗೆಲವು: ಪಂಚ ರಾಜ್ಯಗಳ ಪೈಕಿ, ನಾಲ್ಕರಲ್ಲಿ ಬಿಜೆಪಿ ಸರ್ಕಾರವಿತ್ತು. ಚುನಾವಣೆ ಬಳಿಕವೂ ಉತ್ತರಪ್ರದೇಶ ಸೇರಿದಂತೆ ನಾಲ್ಕೂ ಕಡೆ ಮತ್ತೆ ಪಕ್ಷ ಅಕಾರಕ್ಕೆ ಬರಲಿದೆ. ಪಂಜಾಬ್‌ನಲ್ಲಿ ಸವಾಲು ಇದ್ದು, ಪಕ್ಷ ಅದನ್ನು ಸಮರ್ಥವಾಗಿ ಎದುರಿಸಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಾರಾಂತ್ಯ ಕರ್ಫ್ಯೂ ಅಗತ್ಯವಿಲ್ಲ
ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ನಿಯಂತ್ರಣಕ್ಕೆ ಲಾಕ್‌ಡೌನ್ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿ ಅಗತ್ಯವಿಲ್ಲ. ಹಾಗೆ ಮಾಡುವುದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಪ್ರಲ್ಹಾದ ಜೋಶಿ ಹೇಳಿದರು.
ಸಣ್ಣ ಮೈಕ್ರೊ ಕಂಟೈನ್‌ಮೆಂಟ್ ವಲಯಗಳ ರಚನೆ ಹಾಗೂ ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರ ಪತ್ತೆಗೆ ವ್ಯವಸ್ಥೆ ಮಾಡಿಕೊಂಡು, ಸೋಂಕು ನಿಯಂತ್ರಿಸುವಂತೆ ರಾಜ್ಯಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.
ದೇಶದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆದಿದೆ. ಸೋಂಕಿತರ ಚಿಕಿತ್ಸೆಗಾಗಿ ವೈದ್ಯಕೀಯ ಆಮ್ಲಜನಕ ಸೇರಿದಂತೆ ಹಲವು ಸೌಲಭ್ಯಗಳನ್ನು ಆಸ್ಪತ್ರೆಗಳಿಗೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!