ಹೊಸದಿಗಂತ ವರದಿ, ಬೆಂಗಳೂರು:
ಹೆತ್ತ ಮಗನೇ ತನ್ನ ತಾಯಿಯ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿ ಬಳಿಕ ಕೆ.ಆರ್.ಪುರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಕೆ.ಆರ್.ಪುರದ ಭೀಮಯ್ಯ ಲೇಔಟ್ ನಿವಾಸಿ ನೇತ್ರಾ (40) ಕೊಲೆಯಾದ ದುರ್ದೈವಿ. ಖಾಸಗಿ ಕಂಪನಿ ಉದ್ಯೋಗಿ ನೇತ್ರಾ ಅವರು ಪತಿ ಚಂದ್ರಪ್ಪ ಹಾಗೂ ಹದಿನೇಳು ವರ್ಷದ ಪುತ್ರನೊಂದಿಗೆ ಜಸ್ಟೀಸ್ ಭೀಮಯ್ಯ ಲೇಔಟ್‌ನಲ್ಲಿ ನೆಲೆಸಿದ್ದರು.
ಆರೋಪಿಯು ಕೋಲಾರದ ಮುಳಬಾಗಿಲಿನ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮೊ ವ್ಯಾಸಂಗ ಮಾಡುತ್ತಿದ್ದು, ತಾಯಿ ನೇತ್ರಾ ಹಾಗೂ ಆರೋಪಿ ನಡುವೆ ಆಗಾಗ ಜಗಳವಾಗುತ್ತಲೇ ಇತ್ತು. ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಯುವಕ ಕಾಲೇಜಿಗೆ ತೆರಳಲು ಸಿದ್ದತ್ತೆ ಮಾಡಿಕೊಳ್ಳುತ್ತಿದ್ದು, ಈ ವೇಳೆ ತಿಂಡಿ ಕೊಡುವ ಸಲುವಾಗಿ ಈ ಇಬ್ಬರ ನಡುವಿನ ಜಗಳವಾಗಿದೆ. ಅದು ವಿಕೋಪಕ್ಕೇರಿ ಮನೆಯಲ್ಲಿದ್ದ ಕಬ್ಬಿಣ ರಾಡ್‌ನಿಂದ ನೇತ್ರಾಳ ತಲೆಗೆ ಹೊಡೆದಿದ್ದಾನೆ. ಈ ಸಂಬಂಧ ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.
ತಾಯಿ ಬಳಿ ಕಾಲೇಜಿಗೆ ತಡವಾಗುವ ಹಿನ್ನೆಲೆ ತಿಂಡಿ ಕೊಡುವಂತೆ ಹೇಳಿ, ಮಾತಿಗೆ ಮಾತು ಬೆಳೆದಿದೆ. ಬಳಿಕ ನೇತ್ರಾ, ಕೋಪದಿಂದ ನೀನು ನನ್ನ ಮಗ ಅಲ್ಲ ನಾನು ನಿನ್ನ ತಾಯಿ ಅಲ್ಲ. ನಿನಗೆ ಊಟ ಹಾಕುವುದಿಲ್ಲ ಎಂದು ನಿಂದಿಸಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಮನೆಯ ಕೋಣೆಯಲ್ಲಿದ್ದ ರಾಡ್ ನಿಂದ ತಾಯಿಯ ತಲೆಗೆ ನಡೆಸಿದ್ದಾನೆ.