ಹೊಸದಿಗಂತ ವರದಿ ಮಂಗಳೂರು:
ಅಂಕೋಲದ ಕಾಡು ಪ್ರದೇಶದಲ್ಲಿದ್ದುಕೊಂಡು ಖುದ್ದು ಪದ್ಮ ಪ್ರಶಸ್ತಿಯೇ ಅರಸಿಕೊಂಡು ಬರುವಂತೆ ಸಾಧನೆ ಮಾಡಿದ ತುಳಸಿ ಗೌಡ ಹಾಗೂ ಸುಕ್ರಿಬೊಮ್ಮಗೌಡ ಅವರ ಅಮೂಲ್ಯ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಲು ಈಗ ಪರಿಸರ ಪ್ರೇಮಿ ಸಮಾನ ಮನಸ್ಕರು ಒಂದಾಗಿದ್ದಾರೆ.
ಇದಕ್ಕೆ ಪೂರಕವಾಗಿ ಬಡಿಗೇರಿಯ ಸುಕ್ರಿಮೊಮ್ಮಗೌಡ ಅವರ ಮನೆಯಲ್ಲಿ ತುಳಸಿಗೌಡ ಅವರ ಮನೆ ಮಂದಿಯ ಉಪಸ್ಥಿತಿಯಲ್ಲಿ, ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಅವರ ನೇತೃತ್ವದಲ್ಲಿ ಸಮಾನ ಮನಸ್ಕರ ಸಭೆಯೊಂದನ್ನು ನಡೆಸಲಾಗಿದ್ದು, ಈ ಸಭೆಯಲ್ಲಿ ನಾಡಿನ ಅಮೂಲ್ಯ ರತ್ನಗಳಾಗಿದ್ದ ಈ ಅಜ್ಜಿಯಂದಿರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಟ್ರಸ್ಟ್ ಒಂದನ್ನು ಸ್ಥಾಪಿಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮುಂದಡಿಯಿಡುವ ಬಗ್ಗೆ ಚರ್ಚೆ ನಡೆದಿದೆ. ಈ ಮೂಲಕ ಪರಿಸರ ಸಂರಕ್ಷಣೆಗೆ ಜೀವ ಮುಡಿಪಾಗಿಟ್ಟ ತುಳಸಿ ಅಜ್ಜಿ, ಜಾನಪದ ಹಾಡುಗಳ ಮೂಲಕ ಚಳವಳಿ ಮಾಡಿದ ಸುಕ್ರಿಅಜ್ಜಿಯ ಕನಸು ನನಸಾಗಿಸಲು ಈ ತಂಡ ಭರ್ಜರಿ ಸಿದ್ಧತೆ ಆರಂಭಿಸಿದೆ.
ಶಿಕ್ಷಣ ವಂಚಿತರಾಗಿರುವ ಕಾಡಂಚಿನ ಊರಿನ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ‘ವನಚೇತನ’ ಈಗಾಗಲೇ ಶ್ರಮಿಸುತ್ತಿದೆ. ಇದರ ಜೊತೆಗೇ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಸುಕ್ರಿ ಅಜ್ಜಿಯ ಹಾಡುಗಳನ್ನು ಹಾಡುವುದರ ಮೂಲಕ ತಮ್ಮ ಹಾಡುಗಳಲ್ಲಿ ಸುಕ್ರಜ್ಜಿ ಜಗತ್ತಿಗೆ ಹೇಳಿದ್ದ ಮೌಲ್ಯವನ್ನು ತಿಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದು, ಮಕ್ಕಳು ಈ ಹಾಡುಗಳನ್ನು ಅರಿತು, ಕಲಿತು ಹಾಡುವಂತಾಗಿಸುವುದು, ಅದರ ಸಾರ ಜನರಿಗೆ ಅರ್ಥವಾಗುವಂತೆ ಮಾಡುವುದರ ಬಗ್ಗೆ ಕೂಡಾ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ.
ತುಳಸಿ ಅಜ್ಜಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹಸಿರನ್ನು ಉಳಿಸಲು ಏನೆಲ್ಲಾ ಕಾರ್ಯಕ್ರಮಗಳನ್ನು ಮಾಡಬಹುದು ಎನ್ನುವ ಬಗ್ಗೆ ಕೂಡಾ ಸಭೆಯಲ್ಲಿ ಚರ್ಚಿಸಲಾಗಿದೆ. ಶಾಲಾ ಮಕ್ಕಳಿಗೆ ಗಿಡ ಯಾಕೆ ಬೆಳೆಸಬೇಕು, ನಮಗೂ ಮಣ್ಣಿಗೂ ಇರುವ ಸಂಬಂಧ ಎಂಥದ್ದು? ತುಳಸಿ ಅಜ್ಜಿ ಹಸಿರಿಗಾಗಿ ಏನೆಲ್ಲಾ ಮಾಡಿದ್ದಾರೆ ಎಂದು ತಿಳಿಸಿಕೊಡಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲೂ ಚಿಂತಿಸಲಾಗಿದೆ. ಜೊತೆಗೆ ಈ ಕಾರ್ಯಕ್ರಮಗಳ ರೂಪರೇಷೆಗಳನ್ನು ಕೇಂದ್ರ ಸರ್ಕಾರಕ್ಕೂ ಕಳಿಸುವ ಮೂಲಕ ಆಡಳಿತದ ಸಾಥ್ ಪಡೆದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗಿದೆ.
ಈ ಅಜ್ಜಿಯಂದಿರು ಎಂದೂ ಮನೆ ಕಟ್ಟುವ, ಬಂಗಾರ ಮಾಡಿಕೊಳ್ಳುವ ಕನಸ್ಸನ್ನು ಕಂಡವರಲ್ಲ. ಒಬ್ಬರ ಕನಸು ಮನಸು ಎರಡರಲ್ಲೂ ಹಸಿರೇ ಉಸಿರು, ಇನ್ನೊಬ್ಬರಿಗೆ ಹಾಡುಗಳೇ ಜೀವ, ಅದೇ ಬದುಕು. ಹೋದವರು ಹೋದರು, ಇದ್ದವರದೇ ಜೀವನ ಎನ್ನುವ ಇಂದಿನ ಈ ಕಾಲದಲ್ಲಿ ತಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಪ್ರಯತ್ನ ಮಾಡುತ್ತಿರುವ ಈ ಸಮಾನ ಮನಸ್ಕ ಪರಿಸರ ಪ್ರೇಮಿಗಳ ಕಾಳಜಿ ನಿಜಕ್ಕೂ ಅಭಿನಂದನಾರ್ಹವಾಗಿದೆ.