ಹೊಸದಿಗಂತ ವರದಿ, ರಾಯಚೂರು :
ರಾಜ್ಯ ಕಾಂಗ್ರೆಸ್ ಸರ್ಕಾರ ಆಂಧ್ರ ಮತ್ತು ತೆಲಂಗಾಣಕ್ಕೆ ನೀರು ಕೊಟ್ಟಿದ್ದಾರೆ. ಆದರೆ ರಾಜ್ಯದ ರೈತರ ಜಮೀನುಗಳಿಗೆ ನೀರು ಇಲ್ಲದೆ ಬೆಳೆ ಒಣಗುತ್ತಿವೆ. ಜಿಲ್ಲೆಯ ದೇವದುರ್ಗ, ಲಿಂಗಸುಗೂರು ತಾಲೂಕುಗಳ ರೈತರ ಜೀವನಾಡಿಯಾದ ಬಸವಸಾಗರ ಜಲಾಶಯದಿಂದ ಎನ್ಆರ್ಬಿಸಿ ಕಾಲುವೆಗೆ ನೀರು ಹರಿಸಿದರೆ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ್ ಹೇಳಿದರು.
ಕಾಲುವೆಗೆ ನೀರು ಬಿಡುವಂತೆ ಆಗ್ರಹಿಸಿ ತಾಲೂಕಿನ ಸಾಥ್ ಮೈಲ್ ಬಳಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೀರಿಲ್ಲದೆ ನಮ್ಮ ರೈತರು ಸಂಕಷ್ಟದಲ್ಲಿ ಇದ್ದಾರೆ. ಭತ್ತ, ಶೇಂಗಾ, ಸಜ್ಜೆ ಬೆಳೆ ಒಣಗುತ್ತಿವೆ. ಕಾಲುವೆಗೆ ನೀರು ಬರಲಿಲ್ಲ ಅಂದ್ರೆ ಬೆಳೆಗೆ ಬೆಂಕಿ ಹಚ್ಚುವ ಪರಿಸ್ಥಿತಿ ಇದೆ. ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ನೀರು ಕೊಡಬೇಕು. ಆದರೆ ನೀರು ಬಿಡುವ ಭರವಸೆಯನ್ನು ನೀರಾವರಿ ಮಂತ್ರಿಗಳು ನೀಡುತ್ತಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಬಾಯಿಬಿಟ್ಟರೇ ಜನಪರ, ರೈತರ ಪರ ಅಂತ ಹೇಳುತ್ತಾರೆ. ಡಿಸಿಎಂ ಅವರೇ ನೀರಾವರಿ ಸಚಿವರಿದ್ದಾರೆ ಅವರಿಗೆ ರೈತರ ಕಷ್ಟ ಅರ್ಥವಾಗುತ್ತಿಲ್ಲ. ಡ್ಯಾಂನಲ್ಲಿ ನೀರು ಇದೆ, ಎರಡು ಬಾರಿ ಡ್ಯಾಂ ಫುಲ್ ಆಗಿತ್ತು. ಆ ನೀರು ಎಲ್ಲಿಗೆ ಹೋದವು. ತೆಲಂಗಾಣಕ್ಕೆ ನೀರು ಬಿಟ್ಟಿದ್ದಾರೆ, ಇಂಡಸ್ಟ್ರಿಗಳಿಗೆ ನೀರು ಬಿಡುತ್ತಾರೆ. ಈಗ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸ ಸರ್ಕಾರ ಮಾಡುತ್ತಿದೆ. ನೀರು ಬಿಡುವರೆಗೂ ನಾವು ತೀವ್ರವಾದ ಹೋರಾಟ ಮಾಡುತ್ತೇವೆ ಎಂದ ಶಾಸಕಿ ಜಿ.ಕರೆಮ್ಮ ನಾಯಕ ಆಕ್ರೋಶ ವ್ಯಕ್ತಪಡಿಸಿದರು.
ಏ.೧೫ರವೆಗೆ ಕಾಲುವೆಗೆ ನೀರು ಬಿಡಬೇಕು ಇಲ್ಲದಿದ್ದರೆ ರೈತರ ಹೊಲಗಳಲ್ಲಿ ಬೆಳೆದುನಿಂತಿರುವ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ರೈತರ ಬೆಳೆ ಉಳಿಸಲು ನೀರು ಕೊಡಬೇಕೆಂದು ಆಗ್ರಹಿಸಿ ದೇವದುರ್ಗ ತಾಲೂಕಿನ ಗಬ್ಬೂರಿನಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು ೩೦ ಕಿ.ಮೀ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೂರಾರು ರೈತರು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹೋರಾಟದಲ್ಲಿ ಭಾಗವಹಿಸಿದ್ದರು.