ಕೇಂದ್ರ ಬಜೆಟ್’ನಲ್ಲಿ ರಾಜ್ಯ ಸರಕಾರ ಹೆಚ್ಚಿನ ನಿರೀಕ್ಷೆ ಇರಿಸಿಲ್ಲ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ವರದಿ, ಭಾಗಮಂಡಲ(ಕೊಡಗು):

ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರಕಬೇಕಾದ ತೆರಿಗೆ ಪಾಲನ್ನೇ ಇನ್ನೂ ನೀಡದ ಕೇಂದ್ರ ಸರಕಾರದಿಂದ ಬಜೆಟ್’ನಲ್ಲಿ ಹೆಚ್ಚಿನದ್ದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಭಾಗಮಂಡಲದ ಭಗಂಡೇಶ್ವರ ದೇವಾಲಯದ ಬಳಿ ನಿರ್ಮಿಸಲಾಗಿರುವ ಮೇಲ್ಸೇತುವೆ ಉದ್ಘಾಟನೆಗೆ ಶುಕ್ರವಾರ ಅಪರಾಹ್ನ ಇಲ್ಲಿಗಾಗಮಿಸಿದ ಅವರು, ಹೆಲಿಪ್ಯಾಡ್’ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ಸರಕಾರ ಕರ್ನಾಟಕಕ್ಕೆ ನ್ಯಾಯಯುತವಾಗಿ ನೀಡಬೇಕಾಗಿರುವ ತೆರಿಗೆಯ ಪಾಲನ್ನೇ ಇನ್ನೂ ನೀಡಿಲ್ಲ. ಕರ್ನಾಟಕದ ಶಾಸಕರು, ಸಂಸದರಾದಿಯಾಗಿ ದೆಹಲಿಯಲ್ಲಿ ಇದಕ್ಕಾಗಿ ಪ್ರತಿಭಟನೆ ನಡೆಸಿದ್ದರೂ, ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸರಕಾರ ಕಿವುಡಾಗಿದೆ.‌ಆದ್ದರಿಂದ ಶನಿವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಬಗ್ಗೆ ಹೆಚ್ಚಿನ‌ ನಿರೀಕ್ಷೆ ಇಟ್ಟಿಲ್ಲ ಎಂದು ಹೇಳಿದರು.

ನಾವು ಒಕ್ಕೂಟ ವ್ಯವಸ್ಥೆಯಲ್ಲಿರುವುದರಿಂದ ಕೇಂದ್ರದಿಂದ ಏನನ್ನೂ ನಿರೀಕ್ಷಿಸುವುದಿಲ್ಲ ಎನ್ನುವುದು ತಪ್ಪಾಗುತ್ತದೆ. ನಾನು ಆ ರೀತಿ ಎಲ್ಲೂ ಹೇಳಿಯೂ ಇಲ್ಲ. ಆದರೆ ಬಜೆಟ್’ನಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದ ಅವರು, ನಮಗೆ ಬರಬೇಕಿರುವ ನ್ಯಾಯಯುತ ಪಾಲನ್ನು ಪಡೆಯಲು ಎಲ್ಲಾ ಪ್ರಯತ್ನ ಮಾಡುವುದಾಗಿ ಸಿದ್ದರಾಮಯ್ಯ ತಿಳಿಸಿದರು.

ಕಾವೇರಿ ನದಿ ಸ್ವಚ್ಛತೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂಬಂಧ ರಚಿಸಲಾಗಿರುವ ಸಮಿತಿ ಇನ್ನೂ ವರದಿ ನೀಡಿಲ್ಲ.ವರದಿ ಬಂದ ಬಳಿಕ ಅದನ್ನು ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.

ಸಿ ಮತ್ತು ಡಿ ವರ್ಗದ ಭೂಮಿಯನ್ನು ಮೀಸಲು ಅರಣ್ಯವನ್ನಾಗಿ ಪರಿವರ್ತಿಸುವ ಸಂಬಂಧ ಸಮಿತಿ ರಚಿಸಿ ಅದರ ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಭೂ ಗುತ್ತಿಗೆ ನೀಡುವ ಸಂದರ್ಭ ನಿವೇಶನ ರಹಿತರು, ಭೂರಹಿತರ ಬೇಡಿಕೆಯನ್ನೂ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.

ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಳ: ರಾಜ್ಯದ ಎಲ್ಲಾ ಅರಣ್ಯಗಳಲ್ಲಿ ಆನೆ, ಹುಲಿ,‌ಚಿರತೆ ಮುಂತಾದ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಆಹಾರ ಮತ್ತು ನೀರಿಗಾಗಿ ಅವು ಕಾಡಿನಿಂದ ಹೊರಬರುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯದಂಚಿನಲ್ಲಿ ಬ್ಯಾರಿಕೇಡ್’ಗಳನ್ನು ನಿರ್ಮಿಸಲಾಗುತ್ತಿದ್ದು, ವನ್ಯಪ್ರಾಣಿ-ಮಾನವ ಸಂಘರ್ಷ ತಡೆಯಲು ಸರಕಾರ ಎಲ್ಲಾ ಪ್ರಯತ್ನಗಳನ್ನಯ ಮಾಡಲಿದೆ ಎಂದರು.
ಭಾಗಮಂಡಲ‌ ಮೇಲ್ಸೇತುವೆಗೆ 2016ರಲ್ಲಿ ನಮ್ಮದೇ ಸರಕಾರ ಮಂಜೂರಾತಿ ನೀಡಿದ್ದು, 2017ರಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆ ನಂತರ ಅಧಿಕಾರಕ್ಕೆ ಬಂದ ಸರಕಾರದ ಅವಧಿಯಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ ಹಿನ್ನೆಲೆಯಲ್ಲಿ ಇದೀಗ ನಮ್ಮ ಸರಕಾರ ಅದಕ್ಕೆ ವೇಗ ನೀಡಿ ಕಾಮಗಾರಿ ಪೂರ್ಣಗೊಳಿಸಿದ್ದು, ಇದೀಗ ಉದ್ಘಾಟನೆಯಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು, ಶಾಸಕರಾದ ಎ. ಎಸ್. ಪೊನ್ನಣ್ಣ, ಡಾ. ಮಂಥರ್ ಗೌಡ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು, ಜಿಲ್ಲಾಡಳಿತದ ಪ್ರಮುಖರು ಈ ಸಂದರ್ಭ ಹಾಜರಿದ್ದರು.

ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಭಾಗಮಂಡಲಕ್ಕೆ ಆಗಮಿಸಿದ ಮುಖ್ಯಮಂತ್ರಿಯವರನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕದ್ವಯರು, ಕಾಂಗ್ರೆಸ್ ಮುಖಂಡರು ಹೆಲಿಪಪ್ಯಾಡ್’ನಲ್ಲಿ ಬರಮಾಡಿಕೊಂಡರು. ಜಿಲ್ಲಾಡಳಿತದ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಮುಖ್ಯಮಂತ್ರಿಯವರು ಬಾಗಮಂಡಲದ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿಗೆ ಭೇಟಿ ನೀಡಿದರು.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!