ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ನಾಗರಿಕರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಶುದ್ಧ ನೀರಿನ ಘಟಕಗಳು ಬಾಗಿಲು ಮುಚ್ಚಿಕೊಂಡಿವೆ, ಎಲ್ಲಿ ನೋಡಿದರೂ ಮದ್ಯದ ಅಂಗಡಿ ಮಾತ್ರ ತೆರೆದಿರುತ್ತದೆ. ಈಗ ರಾಜ್ಯದಲ್ಲಿ ಬೀರು ಇದೆ, ನೀರು ಇಲ್ಲ ಎಂಬ ಸ್ಥಿತಿ ನಿರ್ಮಿಸಿರುವ ರಾಜ್ಯ ಸರ್ಕಾರದ ಈ ಆಡಳಿತ ವೈಫಲ್ಯ ಖಂಡಿಸಿ ಸೋಮವಾರ ಬಿಜೆಪಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಶನಿವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಲ್ಲಿ ಶೇ. 60 ರಷ್ಟು ಬೋರ್‌ವೆಲ್‌ಗಳು ನೀರಿಲ್ಲದೆ ಬರಡಾಗಿವೆ. ಕಾವೇರಿ ನೀರು ಪೂರೈಕೆಯಲ್ಲಿ ಶೇ.30 ರಷ್ಟು ಕಡಿತಗೊಳಿಸಿದ್ದಾರೆ. ಸರ್ಕಾರದಲ್ಲಿ ಹಣ ಕೊರತೆ ಇರುವ ಕಾರಣ ಬರ ಘೋಷಣೆಗೆ ಮೀನ ಮೇಷ ಎಣಿಸಲಾಗುತ್ತಿದೆ ಎಂದು ಆರೋಪಿಸಿದರು.
ಇಂದು ಹಳ್ಳಿಗಳಲ್ಲಿ ಜನರು ವಲಸೆ ಹೋಗುತ್ತಿದ್ದರೂ ಅದನ್ನು ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ಬೆಂಗಳೂರಿನಲ್ಲಿ ಸೃಷ್ಟಿಯಾದ ಜಲಕ್ಷಾಮ, ಇಲ್ಲಿನ ಬೇಸಿಗೆಯ ಸ್ಥಿತಿಗತಿಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲೂ ವರದಿಯಾಗುತ್ತಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನ ಮರ್ಯಾದೆಯನ್ನು ಸರ್ಕಾರ ಹರಾಜು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬರಗಾಲದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗೆ ಇಳಿಯಲಿದೆ ಎಂದರು.