ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ನೀಡಲಾಗಿದ್ದ ಕಚೇರಿಯನ್ನು ರಾಜ್ಯ ಸರಕಾರ ವಾಪಸ್ ಪಡೆದುಕೊಂಡಿದೆ.
ಹಳೇ ಪರಿವೀಕ್ಷಣಾ ಮಂದಿರದಲ್ಲಿ ಸೋಮಣ್ಣ ಅವರು ಕಚೇರಿ ಉಪಯೋಗಕ್ಕೆ ಪಡೆದುಕೊಂಡಿದ್ದರು. ಆದ್ರೆ, ಇದೀಗ ಅದು ಉದ್ಘಾಟನೆಗೆ ಸಿದ್ಧವಿರುವಾಗಲೇ ರಾಜ್ಯ ಸರ್ಕಾರ ಕಚೇರಿಯನ್ನು ವಾಪಸ್ ಪಡೆದುಕೊಂಡಿದೆ.
ತುಮಕೂರಿನ ರೈಲ್ವೆ ನಿಲ್ದಾಣ ಬಳಿಯಿರುವ ಹಳೇ ಐಬಿಯನ್ನು ಸೋಮಣ್ಣ ಅವರ ಕಚೇರಿ ಉಪಯೋಗಕ್ಕೆ ನೀಡಲು ಅನುಮೋದನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಚೇರಿ ಎಂದು ಫರ್ನಿಚರ್ಸ್, ವುಡ್ ವರ್ಕ್ ಹಾಗೂ ಟೇಬಲ್ ಚೇರಗಳನ್ನ ಹಾಕಿಸಿದ್ದರು. ಅಲ್ಲದೇ ನಾಡಿದ್ದು ಅಂದರೆ 18-8-24ರ ಭಾನುವಾರದಂದು ಕಚೇರಿ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿತ್ತು. ಆದ್ರೆ, ಕಚೇರಿ ಉದ್ಘಾಟನೆಗೆ ಎರಡು ದಿನ ಬಾಕಿ ಇರುವಾಗಲೇ ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.
ನಾಲ್ಕು ಕೊಠಡಿಗಳನ್ನ ಸೋಮಣ್ಣರಿಗೆ ನೀಡಲಾಗಿತ್ತು. ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಪರಿವೀಕ್ಷಣಾ ಮಂದಿರದ ನಾಲ್ಕು ಕೊಠಡಿಗಳನ್ನ ಉನ್ನತೀಕರಣ ಮಾಡಿಸಿದ್ದರು. ಆದ್ರೆ, ಕಚೇರಿ ಉಪಯೋಗಕ್ಕೆ ನೀಡಿದ ಅನುಮೋದನೆ ಈ ಕೂಡಲೇ ಹಿಂಪಡೆಯುವಂತೆ ತುಮಕೂರು ಜಿಲ್ಲಾಧಿಕಾರಿಗೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ್ ಸೂಚನೆ ನೀಡಿದ್ದಾರೆ.