ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ವಿಶಿಷ್ಟ ಸಮಾಜ ಸೇವಕ ಬಾಬು ಪಿಲಾರ್ ಅವರನ್ನು ಕರ್ನಾಟಕ ಸುವರ್ಣ ಸಂಭ್ರಮ ಹೆಸರಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗಾಗಿ ಬೆಂಗಳೂರಿಗೆ ಕರೆಸಿಕೊಂಡು ಅಧಿಕಾರಿಗಳು ಅವಮಾನಿಸಿದ್ದಾರೆ.
ಬಾಬು ಪಿಲಾರ್ ಅವರನ್ನು ಗುರುವಾರ ರಾತ್ರಿ ಬೆಂಗಳೂರಿನಿಂದ ಅಧಿಕಾರಿಗಳು ಫೋನ್ ಮಾಡಿ ಕರೆಸಿಕೊಂಡಿದ್ದರು. ಆದರೆ, ಕೊನೆಕ್ಷಣದಲ್ಲಿ ನಿಮ್ಮ ಹೆಸರು ಬದಲಾಗಿದೆ, ತಪ್ಪಾಗಿದೆ ಕ್ಷಮಿಸಿ ಎಂದು ಹೇಳಿ ಬೇರೆಯವರಿಗೆ ಪ್ರಶಸ್ತಿ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯದ ವಿವಿಧೆಡೆಯ ಸಾಧಕರನ್ನು ಕರೆಸಿ, ಕರ್ನಾಟಕ -50ರ ಸುವರ್ಣ ಸಂಭ್ರಮ ಎಂಬ ಹೆಸರಲ್ಲಿ ಪ್ರಶಸ್ತಿ ಕೊಡುವ ಸಮಾರಂಭ ಏರ್ಪಡಿಸಲಾಗಿತ್ತು. ನ.1ರ ಸಂಜೆ ವಿಧಾನಸೌಧ ಆವರಣದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಬಾಬು ಪಿಲಾರ್ ಅವರು ಮಂಗಳೂರು ಹೊರವಲಯದ ಉಳ್ಳಾಲ ಪ್ರದೇಶದಲ್ಲಿ ನಿಸ್ವಾರ್ಥವಾಗಿ ಸಾವಿರಾರು ಅನಾಥ ಮತ್ತು ಬಡವರ ಶವಗಳ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದರು.ಇವರನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಸುವರ್ಣ ಸಂಭ್ರಮ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಅವರ ಹಿತೈಷಿಗಳಿಗೆ ಸಂತಸ ನೀಡಿತ್ತು.
ಗುರುವಾರ (ಅ.31) ರಾತ್ರಿ ಸ್ವತಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೆಂದು ಹೇಳಿದ್ದ ನೀಲಮ್ಮ ಎಂಬವರು ಬೆಂಗಳೂರಿನಿಂದ ಫೋನ್ ಕರೆ ಮಾಡಿ ಬಾಬು ಪಿಲಾರ್ ಅವರನ್ನು ತುರ್ತಾಗಿ ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದರು. ಸರಿಯಾಗಿ ನೋಡಿಕೊಳ್ಳಿ, ನನ್ನದೇ ಹೆಸರು ಇದೆಯಲ್ವಾ ಎಂದು ಬಾಬು ಪಿಲಾರ್ ಮತ್ತೆ ಅಧಿಕಾರಿಯಲ್ಲಿ ಸ್ಪಷ್ಟನೆಯನ್ನೂ ಕೇಳಿದ್ದರು. ಆದರೆ, ನಿಮ್ಮದೇ ಹೆಸರು, ಬಾಬು ಕಿಲಾರ್ ಅಂತ ಲಿಸ್ಟಲ್ಲಿ ತಪ್ಪಾಗಿ ಮುದ್ರಣ ಗೊಂಡಿದೆ ಎಂದು ಅಧಿಕಾರಿ ಮರುತ್ತರಿಸಿದ್ದರು. ಅದರಂತೆ, 55ರ ಮಧ್ಯ ವಯಸ್ಸಿನ ಬಾಬು ಪಿಲಾರ್ ಬೆಂಗಳೂರಿಗೆ ಗುರುವಾರ ರಾತ್ರಿಯೇ ಬಸ್ ಹತ್ತಿದ್ದು, ವಿಧಾನಸೌಧದ ಬಳಿಯಲ್ಲೇ ಇತರ ಪ್ರಶಸ್ತಿ ವಿಜೇತರಿಗೂ ನಿಗದಿ ಮಾಡಲಾಗಿದ್ದ ಕುಮಾರಕೃಪಾ ಸರಕಾರಿ ಅತಿಥಿ ಬಂಗಲೆಯಲ್ಲೇ ಬಾಬು ಪಿಲಾರಿಗೂ ಕೊಠಡಿ ಮಾಡಿ ಕೊಟ್ಟಿದ್ದರು. ಭಾನುವಾರ ಮಧ್ಯಾಹ್ನದ ಹೊತ್ತಿಗೆ ಬಾಬು ಪಿಲಾರ್ ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರ ಪಿಎ ಕಿರಣ್ ಎಂಬವರು ಫೋನ್ ಮಾಡಿದ್ದು, ಬಾಬು ಕಿಲಾರ್ ಅಂತ ಬೇರೊಬ್ಬರು ವ್ಯಕ್ತಿ ಇದ್ದಾರೆ. ಮಂಡ್ಯ ಜಿಲ್ಲೆಯ ಕಿಲಾರದವರಾಗಿದ್ದು ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರು ಪ್ರಶಸ್ತಿ ಪಡೆಯಲು ಬಂದಿದ್ದು ನಿಮ್ಮ ಹೆಸರು ತಪ್ಪಾಗಿ ಬಂದಿದೆ ಎಂದು ಹೇಳಿದ್ದಾರೆ. ಇದರಿಂದ ಬಾಬು ಪಿಲಾರ್ ತೀವ್ರ ನೊಂದಿದ್ದು,ತಾನು ಪ್ರಶಸ್ತಿ ಕೇಳದೆನೆ ತನ್ನನ್ನು ಅಧಿಕಾರಿಗಳು ಯಾಕೆ ಕರೆದು ಹೀಗೆ ಮಾಡಿದ್ರು ಎಂದು ಬೇಸರಿಸಿದ್ದಾರೆ.
ಅಧಿಕಾರಿ ನೀಲಮ್ಮ ಅವರಲ್ಲಿ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದಾಗ, ಅದು ಹೇಗೆ ಎಡವಟ್ಟು ಆಯ್ತು ಅನ್ನೋದು ಗೊತ್ತಿಲ್ಲ. ಈಗ ಅವಾರ್ಡ್ ಫಂಕ್ಷನ್ನಲ್ಲಿದ್ದೇನೆ ಏನೋ ತಪ್ಪಾಗಿದೆ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿಗೆ ಬಾಬು ಪಿಲಾರ್ ಅವರನ್ನು ಆಯ್ಕೆಗೊಳಿಸಿ ಪಟ್ಟಿಯಲ್ಲಿ ಹೆಸರು ಬಂದಿತ್ತು. ಆದರೆ, ಅ.31ರ ರಾತ್ರಿ ಬೆಂಗಳೂರಿನಿಂದ ಬಾಬಣ್ಣರನ್ನು ಫೋನ್ ಮಾಡಿ ಕರೆಸಿದ್ದು ತಿಳಿಯುತ್ತಲೇ ಜಿಲ್ಲಾ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿತ್ತು. ಉಳ್ಳಾಲ ಶಾಸಕ, ಸ್ಪೀಕರ್ ಯುಟಿ ಖಾದರ್ ಅವರ ಬೆಂಬಲಿಗರ ಕಡೆಯಿಂದಲೇ ಬಾಬು ಪಿಲಾರ್ ಹೆಸರು ರಾಜ್ಯಕ್ಕೆ ಹೋಗಿತ್ತೋ ಗೊತ್ತಿಲ್ಲ. ಬೆಂಗಳೂರಿನ ಅಧಿಕಾರಿಗಳಿಗೆ ಬಾಬು ಪಿಲಾರ್ ನಂಬರ್, ಪ್ರೊಫೈಲ್ ಹೇಗೆ ಸಿಕ್ಕಿತ್ತೋ ಅದೂ ತಿಳಿದಿಲ್ಲ. ಜಿಲ್ಲಾ ಪ್ರಶಸ್ತಿಗೆ ಶಿಫಾರಸು ಆಗಿದ್ದ ಹೆಸರು ರಾಜ್ಯಕ್ಕೆ ಹೋಗಿ ಎಡವಟ್ಟಾಗಿರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಒಬ್ಬ ನಿಸ್ವಾರ್ಥ ಸಮಾಜ ಸೇವಕನನ್ನು ಪ್ರಶಸ್ತಿ ಕೊಡುತ್ತೇವೆಂದು ಬೆಂಗಳೂರಿಗೆ ಕರೆಸಿ ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳು ಅವಮಾನಿಸಿದ್ದು ಮಾತ್ರ ಆಕ್ಷೇಪನೀಯ.