ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಜನರ ಪ್ರಾಣಕ್ಕೆ ಕಂಟಕವಾಗಿವೆ. ಹೀಗಾಗಿ ಕಂಪನಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಇದೀಗ ಮೈಕ್ರೋ ಫೈನಾನ್ಸ್ ಪ್ರಿವೆನ್ಷನ್ ಆಫ್ ಪೋರ್ಸಿವ್ ಆ್ಯಂಡ್ ಇನ್‌ವ್ಯೂಮನ್ ಮಸೂದೆಗೆ ಸುಗ್ರೀವಾಜ್ಞೆ ತರುವ ವಿಚಾರವಾಗಿ ಇಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್, ಕಾನೂನು ಸಚಿವ ಹೆಚ್ ಕೆ ಪಾಟೀಲ್, ಸಚಿವರಾದ ಎಸ್ ಸಿ ಮಹಾದೇವಪ್ಪ, ಕೆ ಎನ್ ರಾಜಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಇನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಸೂದೆಗೆ ಸುಗ್ರೀವಾಜ್ಞೆ ತರುವ ವಿಚಾರವಾಗಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಕಾನೂನು ಸಂಬಂಧಿಸಿದಂತೆ ಮಾಹಿತಿ ಪಡೆದಿರುವ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಸಭೆಯಲ್ಲಿನ ಚರ್ಚೆಯಾಗಿರುವ ಪ್ರಮುಖ ಅಂಶಗಳು
- ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿಸುವ ಉದ್ದೇಶದಿಂದ ಸುಗ್ರೀವಾಜ್ಞೆಯಲ್ಲಿನ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಬಲಿಷ್ಠ ಕಾಯ್ದೆಯನ್ನು ಆದಷ್ಟು ಬೇಗನೆ ಜಾರಿ ಮಾಡಲು ನಿರ್ಧಾರ. ಈ ಕುರಿತು ಕಾನೂನು ಇಲಾಖೆ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಲು ನಿರ್ಧಾರ.
- ಈ ಕಾಯ್ದೆ ಸಂಪೂರ್ಣ ಸಂವಿಧಾನಬದ್ಧವಾಗಿದ್ದು, ಯಾವುದೇ ಲೋಪದೋಷಗಳನ್ನು ಹೊಂದಿರಬಾರದು ಎಂದು ಸೂಚನೆ.
- ಸಾಲಗಾರರು ಎದುರಿಸುತ್ತಿರುವ ಕಿರುಕುಳವನ್ನು ತಪ್ಪಿಸಲು ಹಾಗೂ ಸಾಲ ನೀಡಿದವರು ಬಲವಂತದ ವಸೂಲಿ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಬಲಿಷ್ಠ ಕಾಯ್ದೆ ರಚನೆಗೆ ನಿರ್ಧಾರ.
- ಇನ್ನು ಈ ಕಾಯ್ದೆಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ.
- ಅಮಾನವೀಯವಾಗಿ ಬಲವಂತದ ಸಾಲ ವಸೂಲಾತಿ ಮಾಡುವವರಿಗೆ ಜಾಮೀನು ರಹಿತ ಪ್ರಕರಣ ದಾಖಲಿಸಲು ನಿರ್ಧಾರ ಮತ್ತು ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಸಿಗಲಿದೆ.
- ನೋಂದಣಿಯಾಗದ ಲೇವಾದೇವಿಗಾರರ ಕಿರುಕುಳವನ್ನು ತಪ್ಪಿಸಲು ಕಠಿಣ ಕಾನೂನು ಜಾರಿ ಮಾಡಲಾಗುತ್ತಿದೆ.
- ಪ್ರಸ್ತುತವಿರುವ ಕಾನೂನಿನಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ನಿಯಂತ್ರಿಸಲು ಹಲವು ಅವಕಾಶಗಳಿದ್ದು, ಅದನ್ನು ಯಾಕೆ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ, ದೂರು ದಾಖಲು ಮಾಡುವ ತನಕ ಕಾಯದೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.
ಇನ್ನು ಮೈಕ್ರೋಫೈನಾನ್ಸ್ ಮಸೂದೆಗೆ ಸುಗ್ರಿವಾಜ್ಞೆ ಹೊರಡಿಸೋದನ್ನ ಮುಂದೂಡಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಮಸೂದೆಗೆ ಕಾನೂನು ತೊಡಕಾಗಬಾರದು. ಏಕೆಂದರೆ ನಾಳೆ ನ್ಯಾಯಾಲಯಕ್ಕೆ ಹೋಗಿ ಸ್ಟೇ ತರುವ ಸಾಧ್ಯತೆ ಇರುತ್ತದೆ. ಅದರರಲ್ಲೂ ಇದಕ್ಕೆ RBI ಕಾನೂನು, ಮನಿಲಾಂಡ್ರಿಂಗ್ ಕಾನೂನುಗಳು ಮಸೂದೆಗೆ ಅಡೆತಡೆಯಾಗಬಾರದು. ಹೀಗಾಗಿ ಮಸೂದೆಯನ್ನ ಮತ್ತೊಮ್ಮೆ ಪರೀಶೀಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನು ಈ ಮಸೂದೆಯ ಮರು ಪರಿಶೀಲನೆಗೆ ಕಾನೂನು ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವನ್ನೂ ರಚಿಸಲಾಗಿದೆ.