ಹೊಸದಿಗಂತ ಹಾಸನ :
ನಾನು ರಾಜ್ಯದ ಸಂಸದನಾಗಿ, ಕೇಂದ್ರ ಸಚಿವನಾಗಿ ರಾಜ್ಯಕ್ಕೆ ಬರುವುದನ್ನು ಸಹಿಸಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ರಾಜ್ಯ ಸರಕಾರ ನನಗೆ ಹೆಜ್ಜೆಹೆಜ್ಜೆಗೂ ಅಡ್ಡಿಪಡಿಸುತ್ತಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರೊಂದಿಗೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲು ಗ್ರಾಮದಲ್ಲಿ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರತಿಯೊಂದಕ್ಕೂ ಕೇಂದ್ರ ಸರಕಾರದ ಸಹಕಾರ ಕೇಳುವ ರಾಜ್ಯ ಸರಕಾರವು ಒಬ್ಬ ಕೇಂದ್ರ ಸಚಿವ ರಾಜ್ಯಕ್ಕೆ ಬರುವುದನ್ನು ಸಹಿಸುತ್ತಿಲ್ಲ. ನಿನ್ನೆಯ ದಿನ ಉತ್ತರ ಕನ್ನಡ ಜಿಲ್ಲೆಯ ಶಿಶೂರು ಬಳಿ ಗುಡ್ಡ ಕುಸಿದ ಸ್ಥಳಕ್ಕೆ ನಾನು ಭೇಟಿ ನೀಡಿದಾಗ ಐದು ಕಿ.ಮೀ. ಹಿಂದೆಯೇ ಬ್ಯಾರಿಕೇಡ್ ಗಳನ್ನು ಹಾಕಿ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಯಿತು. ಕುಮಾರಸ್ವಾಮಿ ಮಳೆಹಾನಿ ಸಮೀಕ್ಷೆ ನಡೆಸಿದ್ದನ್ನು ವರದಿ ಮಾಡಬಾರದು ಎಂದು ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು ಎಷ್ಟು ಸರಿ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಕರ್ನಾಟಕಕ್ಕೆ ನಾನು ಬರುವುದನ್ನೇ ಸಹಿಸಲ್ಲ ಅಂದರೆ ನನ್ನಿಂದ ಏನು ನಿರೀಕ್ಷೆ ಮಾಡುತ್ತಾರೆ ಇವರು? ನಾನು ಬರಲೇಬಾರದು ಎನ್ನುವ ರೀತಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡುವುದು ಜನಪ್ರತಿನಿಧಿಯಾಗಿ ನನ್ನ ಧರ್ಮ. ಮಂಡ್ಯಕ್ಕೆ ಹೋದರೂ ಬೇಡ ಎನ್ನುತ್ತಾರೆ, ಉತ್ತರ ಕನ್ನಡ ಜಿಲ್ಲೆಗೆ ಹೋದರೂ ಅಂದರೆ ಅಲ್ಲಿಗೂ ಬೇಡ ಅಂತಾರೆ. ಸದ್ಯ ಹಾಸನಕ್ಕೆ ಬರಬೇಡಿ ಅನ್ನಲಿಲ್ಲ. ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದರೆ ಇವರಿಗೆ ಕೈಕಾಲು ನಡುಗುತ್ತದೆ ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.
ಯಾವ ಸರಕಾರವೂ ಹತ್ತು ಲಕ್ಷ ಪರಿಹಾರ ನೀಡಲು ಸಾಧ್ಯವೇ ಇಲ್ಲ ಎಂದು ಸಚಿವ ಮಂಕಾಳ ವೈದ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು; ಅವರಿಗೆ ಯಾವ ಸಂದರ್ಭದಲ್ಲಿ ಎಷ್ಟೆಷ್ಟು ಪರಿಹಾರ ನೀಡಲಾಗಿದೆ ಎಂಬ ಮಾಹಿತಿ ಇದ್ದಂತೆ ಇಲ್ಲ. ಅವರಿಗೆ ಸಮಯ ಸಿಕ್ಕಿದರೆ ಕೊಡುಗು ಜಿಲ್ಲೆಗೆ ಭೇಟಿ ನೀಡಲಿ. 2018ರಲ್ಲಿ ನಾನು ಸಿಎಂ ಆಗಿದ್ದಾಗ ಅಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾದಾಗ ಅನೇಕರು ಮನೆಮಠ ಆಸ್ತಿಗಳನ್ನು ಕಳೆದು ನಿರಾಶ್ರಿತರಾಗಿದ್ದರು. ಕೆಲವೇ ತಿಂಗಳಲ್ಲಿ ಎಲ್ಲಾ ನಿರಾಶ್ರಿತ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ಕಟ್ಟಿಕೊಡಲಾಯಿತು. ಜತೆಗೆ; ಒಂದು ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ, ಆಹಾರ ಪದಾರ್ಥ ಕೊಳ್ಳಲು ಐವತ್ತು ಸಾವಿರ ರೂ. ಕೊಟ್ಟಿದ್ದೇವೆ. ಬಹುಶಃ ಸಚಿವರಿಗೆ ಇದೆಲ್ಲಾ ಗೊತ್ತಿಲ್ಲದೆ ಇರಬಹುದು. ದಯಮಾಡಿ ಅವರು ಬಿಡುವು ಮಾಡಿಕೊಂಡು ಹೋಗಿ ಕೊಡಗಿನಲ್ಲಿ ಪರಿಸ್ಥಿತಿಯನ್ನು ಅವಲೋಕನ ಮಾಡಲಿ ಎಂದು ಸಲಹೆ ಮಾಡಿದರು.
ಮಳೆಹಾನಿ ಪ್ರದೇಶಗಳಿಗೆ ನಾನು, ಅಶೋಕ್ ಒಟ್ಟಿಗೆ ಭೇಟಿ ನೀಡಿದ್ದೇವೆ. ಇಲ್ಲಿ ಜಿಲ್ಲಾಡಳಿತ ಸೂಕ್ಷ್ಮವಾಗಿ ನೋಡಲು ಸ್ವಲ್ಪ ಸಹಕಾರ ಕೊಟ್ಟಿದ್ದಾರೆ. ನಿನ್ನೆ ದಿನ ಶಿಶೂರು ಗುಡ್ಡದಲ್ಲಿ ಐದು ಕಿಲೋಮೀಟರ್ ದೂರದಲ್ಲಿ ಮಾಧ್ಯಮಗಳಿಗೆ ತಡೆಗೋಡೆ ಇಟ್ಟು ಏನು ಚಿತ್ರೀಕರಣ ಮಾಡದ ರೀತಿ ಆದೇಶ ಮಾಡಿದ್ದರು. ನಾನು ಯಾರನ್ನೂ ಟೀಕೆ ಮಾಡಲು ಹೋಗಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರ ವಿಶ್ವಾಸದಲ್ಲಿ ಕೆಲಸ ಮಾಡಬೇಕು. ಬಹುಶಃ ರಾಜ್ಯದ ಸರಕಾರದಲ್ಲಿ ಕೆಲಸ ಮಾಡುತ್ತಿರುವ ಕೆಲ ಸಚಿವರಿಗೆ ಅಂಥ ವಿವೇಕ ಇದ್ದಂತೆ ಇಲ್ಲ ಎಂದು ಅವರು ಕಟುವಾಗಿ ಟೀಕಿಸಿದರು.