ಹೊಸದಿಗಂತ ವರದಿ,ರಾಯಚೂರು :
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಬೇಕಾದ ಜಮೀನು ಸೇರಿದಂತೆ ಇನ್ನಿತರ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ಕೇಂದ್ರ ಆರೋಗ್ಯ ಸಚಿವರಿಗೆ ತಿಳಿಸಿದ್ದಾರೆ. ಈಗ ಕೇಂದ್ರ ಸರ್ಕಾರದ ಅಂಗಳದಲ್ಲಿ ಚಂಡಿದೆ. ಇಲ್ಲಿ ಏಮ್ಸ್ ಸ್ಥಾಪನೆಗೆ ಅವರೇ ನಿರ್ಧಾರ ತಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಸ್ಪಷ್ಟಪಡಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರವನ್ನು ರಾಜ್ಯ ಸರ್ಕಾರ ನೀಡುವುದಕ್ಕೆ ಸಿದ್ಧವಿದೆ ಎಂದರೂ ಕೇಂದ್ರ ಏಕೆ ಮೀನಾಮೇಶ ಮಾಡುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ರಾಯಚೂರಿನಲ್ಲಿನೇ ಏಮ್ಸ್ ಸ್ಥಾಪನೆ ಮಾಡುವದಾಗಿ ನಾನು ಈ ಹಿಂದೆ ಹುಬ್ಭಳ್ಳಿಯಲ್ಲಿಯೂ ಸ್ಪಷ್ಟನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಲಬುರಗಿಯಲ್ಲಿ ಸ್ಥಾಪನೆಯಾಗುತ್ತಿರುವ ಜಯದೇವ ಆಸ್ಪತ್ರೆ ಕೇವಲ ಕಲಬುರಗಿಗೆ ಸೀಮಿತವಾದುದಲ್ಲ. ಅದು ಇಡೀ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಒಳಗೊಂಡಿದೆ. ಹುಬ್ಬಳ್ಳಿಯಲ್ಲಿ ಸ್ಥಾಪನೆ ಆಗುತ್ತಿರುವ ಆಸ್ಪತ್ರೆ ಮುಂಬೈ ಕರ್ನಾಟಕಕ್ಕೆ ಒಳಪಡುತ್ತದೆ. ಬೆಂಗಳೂರು, ಮೈಸೂರುಗಳಲ್ಲಿ ಅಲ್ಲದೆ ರಾಜ್ಯ ಸರ್ಕಾರ ವಿಭಾಗಕ್ಕೊಂದು ಆಸ್ಪತ್ರೆಯನ್ನು ಸ್ಥಾಪನೆಗೆ ಮುಂದಾಗುತ್ತಿದೆ ಎಂದು ತಿಳಿಸಿದರು.
ರಾಯಚೂರಿನ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಚಾಲನೆಗೆ ಕೇಂದ್ರ ವಿಮಾನಯಾನ ಸಾರಿಗೆ ಸಚಿವರನ್ನು ಭೇಟಿ ಆಗಿದ್ದೇವೆ. ಅವರು ಸಹ ಮಂಜೂರಾತಿ ಮತ್ತು ಎಲ್ಲ ರೀತಿಯ ಸಹಕಾರವನ್ನು ನೀಡುವದಾಗಿ ತಿಳಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರತ್ಯೇಕ ಅನುದಾನದಲ್ಲಿ ಕೈಗೊಳ್ಳುವಂತೆ ಕಲ್ಯಾಣ ಕರ್ನಾಟಕದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೂ ಪ್ರತ್ಯೇಕ ಅನುದಾನದಲ್ಲಿ ಕೈಗೊಳ್ಳದೇ ಕೆಕೆಆರ್‌ಡಿಬಿ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಈ ಭಾಗಕ್ಕೆ ಮತ್ತೆ ಅನ್ಯಾಯವಾಗುತ್ತಿದೆ ಎನ್ನುವ ವಾದ ಸರಿಯಾದುದಲ್ಲ ಯಾವುದೇ ಅನುದಾನದಲ್ಲಿ ಕೈಗೊಂಡರೂ ಇಲ್ಲಿನ ಅಭಿವೃದ್ಧಿಗಾಗಿನೇ ವ್ಯಯಮಾಡಲಾಗುತ್ತಿದೆ. ಆಯಾ ಇಲಾಖೆಗಳ ಅಭಿವೃದ್ಧಿ ಕಾರ್ಯಗಳನ್ನು ಆಯಾ ಇಲಾಖೆಯ ಅನುದಾನದಲ್ಲಿ ಅನುಷ್ಠಾನ ಮಾಡುವಂತೆಯೂ ನಾವು ಕೇಳಿಕೊಂಡಿದ್ದೇವೆ ಎಂದರು.
ಜಿಲ್ಲಾ ಆಡಳಿತ ಭವನದಲ್ಲಿ ಒಂದೊoದೇ ಕಚೇರಿಗಳು ಕೆಲಸಗಳು ಪೂರ್ಣಗೊಂಡoತೆ ಕಚೇರಿಗಳನ್ನು ಸ್ಥಳಾಂತರಿಸಲಾಗುವುದು. ಎಲ್ಲ ಕಚೇರಿಗಳು ಸ್ಥಳಾಂತರಗೊoಡನoತರ ಕಟ್ಟಡ ಉದ್ಘಾಟನೆಯನ್ನು ಮಾಡಲಾಗುವುದು. ನೂತನ ರಂಗ ಮಂದಿರ ನಿರ್ಮಾಣಕ್ಕೆ ಅನುದಾನವಿದೆ ಆದರೆ ಅಗತ್ಯಕ್ಕೆ ತಕ್ಕಷ್ಟು ನಗರದಲ್ಲಿ ಜಾಗೆ ದೊರೆಯುತ್ತಿಲ್ಲ ಹೀಗಾಗಿ ವಿಳಂಬವಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಬಸನಗೌಡ ದದ್ದಲ, ವಿ.ಪ ಸದಸ್ಯ ಎ.ವಸಂತಕುಮಾರ, ಜಿಲ್ಲಾಧಿಕಾರಿ ನಿತೀಶ.ಕೆ., ಜಿ.ಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ ಸೇರಿದಂತೆ ಇತರರಿದ್ದರು.