ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡ್ನೂರು ಕಾವು ಎಂಬಲ್ಲಿ ನಡೆದ ಓಮ್ನಿ ಕಾರು ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಅಂತರ್‌ರಾಜ್ಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೇರಳ ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ, (25), ಮೊಹಮ್ಮದ್ ಆಸೀಕ್ (25) ಮೊಹಮ್ಮದ್ ಸಿರಾಜ್ (28) ಹಾಗೂ ತಮಿಳುನಾಡು ಕರೂರು ನಿವಾಸಿ ಶಕ್ತಿವೇಲು ಜಿ. (24) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕಳ್ಳತನ ಮಾಡಿದ 2.5 ಲಕ್ಷ ರೂ. ಮೌಲ್ಯದ ಓಮ್ನಿ ಕಾರು, ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಒಂದು ಲಕ್ಷ ರೂ. ಮೌಲ್ಯದ ಕೆಟಿಎಂ ಬೈಕ್‌ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ತನಿಖೆಯ ವೇಳೆ, ಕಳವಾದ ಓಮ್ನಿ ಕಾರನ್ನು ಕೇರಳ ರಾಜ್ಯಕ್ಕೆ ಕೊಂಡೊಯ್ದು, ಬಳಿಕ ಅಲ್ಲಿಂದ ತಮಿಳುನಾಡಿಗೆ ಮಾರಾಟ ಮಾಡಿ, ಅಲ್ಲಿ ವಾಹನವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ಮೇಲೆ ಕೇರಳದ ಬದಿಯಡ್ಕ, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಬಂಧಿತರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಇಲ್ಲಿನ ಮಾಡ್ನೂರು ಕಾವು ಪ್ರದೇಶದಲ್ಲಿ ಜೂ. 19ರಿಂದ 20ರ ನಡುವಿನ ಅವಧಿಯಲ್ಲಿ ಓಮ್ನಿ ಕಾರು ಕಳ್ಳತನವಾಗಿತ್ತು. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರುಗಳ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ಗುಣಪಾಲ ಜೆ., ಸುಷ್ಮಾ.ಜಿ ಭಂಡಾರಿ ನೇತೃತ್ವದ ತನಿಖಾ ತಂಡವು ಪ್ರಕರಣದ ತನಿಖೆ ಕೈಗೆತ್ತಿಕೊಂಡು ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತನಿಖೆ ನಡೆಸಿ ಇವರುಗಳನ್ನು ಬಂಧಿಸಿದೆ.



