ಹೊಸದಿಗಂತ ವರದಿ ಚಿತ್ರದುರ್ಗ
ಇಲ್ಲಿನ ಮುರುಘಾ ಮಠದಲ್ಲಿ ಕಳ್ಳತನವಾಗಿದ್ದ ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ಪುತ್ಥಳಿ ಇದ್ದಕ್ಕಿದ್ದಂತೆ ಮಠದ ಆವರಣದಲ್ಲಿ ದಿಢೀರ್ ಪ್ರತ್ಯಕ್ಷವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಮಠದಲ್ಲಿದ್ದ ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ಪುತ್ಥಳಿಯನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗಿ ಮೂರು ದಿನ ಕಳೆಯುವಷ್ಟರಲ್ಲೇ ಕಳವು ಮಾಡಲಾಗಿದ್ದ ಮುರುಘಾ ಶರಣರ ಬೆಳ್ಳಿ ಪುತ್ಥಳಿ ಇದ್ದಕ್ಕಿದ್ದಂತೆ ಮಠದ ಆವರಣದಲ್ಲಿ ಕಂಡು ಬಂದಿದೆ.
ಮಠದ ಆವರಣದಲ್ಲಿರುವ ಎಸ್‍ಜೆಎಂ ಕನ್ನಡ ಮಾಧ್ಯಮ ಶಾಲೆಯ ಬಳಿ ಮುರುಘಾ ವನಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಕಾಂಪೌಂಡ್ ಗೋಡೆ ಹತ್ತಿರ ಶರಣರ ಬೆಳ್ಳಿ ವಿಗ್ರಹವನ್ನು ಗೋಣಿ ಚೀಲದಲ್ಲಿ ಇಟ್ಟು ಹೋಗಲಾಗಿದೆ.
ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠದ ಶೂನ್ಯ ಪೀಠಾರೋಹಣ ಮಾಡಿ 25 ವರ್ಷಗಳ ಸಂಭ್ರಮದ ನೆನಪಿಗಾಗಿ ಮಠದ 22 ಕೆ.ಜಿ. ತೂಕದ ಸುಮಾರು 25 ಲಕ್ಷ ರೂ. ಮೌಲ್ಯದ ಬೆಳ್ಳಿ ವಿಗ್ರಹವನ್ನು ಭಕ್ತರು ಕೊಡುಗೆಯಾಗಿ ನೀಡಿದ್ದರು.