ಬಂಗಾಳದ 25 ಸಾವಿರ ಶಿಕ್ಷಕರ ವಜಾ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ಪಶ್ಚಿಮ ಬಂಗಾಳದ ಶಾಲೆಗಳಿಗೆ ನೇಮಕಗೊಂಡ 25 ಸಾವಿರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು (School Jobs) ಕೆಲಸದಿಂದ ವಜಾಗೊಳಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್‌ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಜೊತೆಗೆ ನೇಮಕಾತಿ ವೇಳೆ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ದ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಬಂಗಾಳದಲ್ಲಿ ನೇಮಕಗೊಂಡ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಿಗೆ 25,753 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ವಜಾಗೊಳಿಸಿ ಏಪ್ರಿಲ್‌ 22ರಂದು ಕಲ್ಕತ್ತಾ ಹೈಕೋರ್ಟ್‌ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ಹೈಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ನೀಡಿದರು.ಜೊತೆಗೆ ನೇಮಕಾತಿ ಹಗರಣದ ಕುರಿತು ಸಿಬಿಐ ತನಿಖೆ ಮುಂದುವರಿಸಿ, ಪೂರ್ಣಗೊಳಿಸಬೇಕು. ಅಲ್ಲಿಯವರೆಗೆ ನೇಮಕಗೊಂಡವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಸೂಚಿಸಿದರು.

ಸರ್ಕಾರಿ ನೌಕರಿ ಸಿಗುವುದೇ ತುಂಬ ವಿರಳ. ಹಾಗಾಗಿ, ನೌಕರರನ್ನು ವಜಾಗೊಳಿಸಿದರೆ, ಸಾರ್ವಜನಿಕ ನಂಬಿಕೆ ಎಂಬುದೇ ಇರುವುದಿಲ್ಲ. ಸರ್ಕಾರಿ ಉದ್ಯೋಗವನ್ನು ಕಾನೂನು ಬಾಹಿರವಾಗಿ ಪಡೆದುಕೊಂಡರೆ, ಜನರಿಗೆ ವ್ಯವಸ್ಥೆ ಮೇಲೆ ನಂಬಿಕೆಯೇ ಇರುವುದಿಲ್ಲ. ಇನ್ನು ನೇಮಕಾತಿ ಪ್ರಕ್ರಿಯೆ ಸೇರಿ ಯಾವುದೇ ದಾಖಲೆಗಳು ಸರ್ಕಾರದ ಬಳಿ ಇಲ್ಲ. ಸರ್ಕಾರದ ಬಳಿ ದಾಖಲೆಯೇ ಇಲ್ಲ ಎಂದರೆ ಹೇಗೆ? ನೇಮಕಾತಿ ವೇಳೆ ಎಲ್ಲ ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿ ಇಡಬಹುದಿತ್ತಲ್ಲಎಂದು ರಾಜ್ಯ ಸರ್ಕಾರಕ್ಕೆ ಕೋರ್ಟ್‌ ಚಾಟಿ ಬೀಸಿತು.

2016ರಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕ ಮಾಡಲಾಗಿತ್ತು. ಈ ಪ್ರಕ್ರಿಯೆಯನ್ನು ಕಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿತ್ತು. ನೇಮಕಗೊಂಡ 25,753 ಮಂದಿಯನ್ನು ವಜಾಗೊಳಿಸಬೇಕು ಹಾಗೂ ಅವರು ಇದುವರೆಗೆ ಪಡೆದ ವೇತನವನ್ನು ಶೇ.12ರಷ್ಟು ಬಡ್ಡಿಯೊಂದಿಗೆ ಹಂತಿರುಗಿಸಬೇಕು ಎಂದು ಆದೇಶ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!