ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಪಾಂಡಿಚೆರಿಯಲ್ಲಿ ನಡೆದ 3ನೇ ಜಯನ್ ಬಾಕ್ಸಿಂಗ್ ಫೆಸ್ಟಿವಲ್ 2022ರಲ್ಲಿ ಸಿದ್ದಿ ಜನಾಂಗದ ಕ್ರೀಡಾಪಟುಗಳು ಏಳು ಪದಕಗಳನ್ನು ಗೆಲ್ಲುವ ಮೂಲಕ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಆರ್. ಜಯನ್ ಬಾಕ್ಸಿಂಗ್ ಫೆಸ್ಟಿವಲ್ ವಲ್‌ನಲ್ಲಿ ವಿದ್ಯಾನಗರ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿರುವ ಸಿದ್ದಿ ಜನಾಂಗದ 8 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಪೈಕಿ ಏಳು ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.
ಜೋಸೆಫ್ ಬಸ್ತಾವೋನಾ (ಎಲಿಟ್ 71-75 ಕೆಜಿ ವಿಭಾಗ), ಸ್ಟೀವನ್ ಸಂಜನ್ ಸಲಗಟ್ಟಿ(ಯೂತ್ 54-57 ಕೆಜಿ ವಿಭಾಗ) ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ವಿಜೇತರಾಗಿದ್ದಾರೆ.
ದರ್ಶನ್ ಮಹಾಬಲೇಶ್ವರ ಸಿದ್ದಿ(ಯೂತ್ 67-71 ಕೆಜಿ), ದಿನೇಶ್ ಶಂಕರ್ ಸಿದ್ದಿ ಯೂತ್ 48-50 ಕೆಜಿ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಿಖಿಲ್ ಮರಿಯನ್ ಸಿದ್ದಿ(ಯೂತ್ 50-52 ಕೆಜಿ), ಕಿರಣ್ ಸಂಜನ್ ಸಲಗಟ್ಟಿ (ಜ್ಯೂನಿಯರ್ 50-52 ಕೆಜಿ), ಹಜರತ್ ಆಲಿ ಜ್ಯೂನಿಯರ್ 42-44 ಕೆಜಿ ವಿಭಾಗದಲ್ಲಿ ಕಂಚು ಪದಕವನ್ನು ವಿಜೇತರಾಗಿದ್ದಾರೆ.
ವಿದ್ಯಾನಗರ ಕ್ರೀಡಾ ವಸತಿ ಶಾಲೆಯ ಜೋಸೆಫ್ ಬಸ್ತಾವೊನಾ ಅವರು ಬೆಸ್ಟ್ ಬಾಕ್ಸರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಯುವಸಬಲೀಕರಣ – ಕ್ರೀಡಾ ಸಚಿವರಿಂದ ಶ್ಲಾಘನೆ:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಈ ಬಗ್ಗೆ ಸಂತಸ ವ್ಯಕ್ತಪಡಿಸಿ, ಸಿದ್ದಿ ಜನಾಂಗದ ಮಕ್ಕಳಿಗೆ ವಿಶೇಷ ಸಾಮರ್ಥ್ಯವಿದೆ. ಆದರೆ ಅವರಿಗೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ, ಸಿದ್ದಿ ಜನಾಂಗದದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಕ್ರೀಡಾ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಉತ್ತಮ ತರಬೇತಿ ಪಡೆದು ಪಾಂಡಿಚೇರಿಯಲ್ಲಿ ನಡೆದ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ 8 ಕ್ರೀಡಾಪಟುಗಳ ಪೈಕಿ ಏಳು ಮಂದಿ ಪದಕ ಗೆದ್ದಿದ್ದಾರೆ. ಇದು ಆರಂಭ ಅಷ್ಟೇ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ, ಹಲವು ಪದಕಗಳನ್ನು ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತರಲಿದ್ದಾರೆ ಎಂದು ಸಚಿವ ಡಾ.ನಾರಾಯಣ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.