ಹೊಸದಿಗಂತ ಡಿಜಿಟಲ್ ಡೆಸ್ಕ್:
‘ದಿ ಎಲಿಫೆಂಟ್ ವಿಸ್ಪರರ್ಸ್’ (The Elephant Whisperers) ಸಿನಿಮಾದ ಬೊಮ್ಮನ್ (Bomman) ಮತ್ತು ಬೆಳ್ಳಿಯ (Belli) ದಂಪತಿಗೆ ತಮಿಳುನಾಡು (Tamil Nadu) ಸರಕಾರ ಸಿಹಿ ಸುದ್ದಿ ನೀಡಿದೆ.
ಆರ್ಥಿಕ ಸಂಕಷ್ಟದಿಂದ ಈ ದಂಪತಿ ಬಳಲುತ್ತಿದ್ದರು ಎನ್ನುವ ಮಾಹಿತಿ ಸಿಕ್ಕ ತಕ್ಷಣವೇ ಬೆಳ್ಳಿಗೆ ಸರಕಾರಿ ನೌಕರಿಯನ್ನು ತಮಿಳುನಾಡು ಸರಕಾರ ನೀಡಿದೆ. ಈ ಮೂಲಕ ಮೊದಲ ಸರಕಾರಿ ಕಾವಡಿಯಾಗಿ ಬೆಳ್ಳಿ ನೇಮಕಗೊಂಡಿದ್ದಾರೆ.
ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಆಸ್ಕರ್ ಅವಾರ್ಡ್ ಗೆಲ್ಲುವ ಮೂಲಕ ಭಾರತೀಯರು ಹೆಮ್ಮೆಪಡುವಂತೆ ಮಾಡಿತ್ತು. ಇದರಲ್ಲಿ ಪ್ರಮುಖವಾಗಿ ನಟಿಸಿದ್ದ ಬೊಮ್ಮನ್- ಬೆಳ್ಳಿ ಅವರಿಗೆ ಈ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸನ್ಮಾನ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ಮಾಡಿ ಅಭಿನಂದಿಸಿದ್ದರು.
ಬೊಮ್ಮನ್-ಬೆಳ್ಳಿ ಅವರು ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರದಲ್ಲಿ ವಾಸವಾಗಿದ್ದಾರೆ.