ಹೊಸದಿಗಂತ ವರದಿ ಮಂಡ್ಯ:
ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆ 2.25 ಲಕ್ಷ ಟನ್ ಕಬ್ಬು ನುರಿಸಿದ್ದು, 1.58 ಲಕ್ಷ ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿದೆ. ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ 54.14 ಕೋಟಿ ಹಣ ಸಂದಾಯ ಮಾಡಲಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದ್ದು, 4 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುವ ಸಾಧ್ಯತೆ ಇದೆ ಎಂದರು.
ಜಿಲ್ಲೆಯಲ್ಲಿ ಒಂದೇ ಬಾರಿಗೆ ಎಂಟು ಸಂಪರ್ಕ ಕೇಂದ್ರಗಳನ್ನು ನಿರ್ಮಾಣ ಮಾಡಲು 16 ಕೋಟಿ ರೂ. ಪ್ರಸ್ತಾವನೆಗೆ ಮಂಜೂರಾತಿ ನೀಡಲಾಗಿದೆ. ಪ್ರಧಾನಮಂತ್ರಿ ಫಸಲ್ ಭಿಮಾ ಬೆಳೆ ವಿಮಾ ಯೋಜನೆಯಡಿ ಮಾಡಿದ ಸಾಧನೆಗಾಗಿ ಕೇಂದ್ರ ಸರ್ಕಾರ ಮಂಡ್ಯ ಜಿಲ್ಲೆಗೆ ಪ್ರಥಮ ಬಹುಮಾನ ನೀಡಿದೆ ಎಂದರು.
ಪಿಎಂಎಫ್‌ಎಂಇ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ 142 ರೈತ ಉದ್ದಿಮೆದಾರರಿಗೆ 39.17 ಕೋಟಿ ಮೊತ್ತದ ಸಾಲ ಹಾಗೂ 12.94 ಕೋಟಿ ರೂ. ಸಹಾಯಧನ ಮಂಜೂರು ಮಾಡಲಾಗಿದೆ. ಜಿಲ್ಲೆಯ ಸಹಾಯಧನ ವಿತರಣೆ ಮಾಡುವಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದರು.
ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ ನಿವೇಶನ ರಹಿತರಿಗೆ ನಿವೇಶನ ಹಂಚಲು 137.06 ಎಕರೆ ಜಮೀನು ಲಭ್ಯವಿದ್ದು, ಈ ಜಮೀನಿನಲ್ಲಿ 3,960 ನಿವೇಶನಗಳನ್ನು ನೀಡುವ ಉದ್ದೇಶವಿದೆ. ಇಲ್ಲಿಯವರೆಗೆ 995 ನಿವೇಶನ ರಹಿತರಿಗೆ ನಿವೇಶನದ ಹಕ್ಕು ಪತ್ರ ವಹಿಸಲಾಗಿದೆ. 706 ಹಕ್ಕುಪತ್ರಗಳನ್ನು ವಸತಿ ನಿಗಮದಿಂದ ಪಡೆಯಲಾಗಿದ್ದು, ಬಾಕಿ ಉಳಿದ 2965 ನಿವೇಶನಗಳನ್ನು ನಿವೇಶನ ರಹಿತರಿಗೆ ಹಂಚಲು ಕ್ರಮವಹಿಸಲಾಗಿದೆ ಎಂದು ಹೇಳಿದರು.