Thursday, March 23, 2023

Latest Posts

ಭಾರತೀಯರನ್ನು ಕರೆತರುವ ಕಾರ್ಯ ಅಚ್ಚುಕಟ್ಡಾಗಿ ನಡೆಯುತ್ತಿದೆ: ಅಪ್ಪಚ್ಚುರಂಜನ್

ಹೊಸದಿಗಂತ ವರದಿ, ಕುಶಾಲನಗರ:

ಯುದ್ಧ ಪೀಡಿತ ಉಕ್ರೇನ್’ನಿಂದ ಭಾರತೀಯರನ್ನು ಯಾವುದೇ ಖರ್ಚಿಲ್ಲದೆ ಭಾರತಕ್ಕೆ ಕರೆತರುವ ಕಾರ್ಯ ಅಚ್ಚುಕಟ್ಟಾಗಿ ನಡೆಯುತ್ತಿದೆ. ಇತರೆ ಯಾವುದೇ ದೇಶದವರು ತಮ್ಮ ಪ್ರಜೆಗಳ‌ ಬಗ್ಗೆ ತೋರದ ಕಾಳಜಿ ಭಾರತ ತೋರಿದೆ ಎಂದು ಮಡಿಕೇರಿ ಶಾಸಕ‌ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ‌ ಕಲ್ಯಾಣ ಇಲಾಖೆ ವತಿಯಿಂದ ಕುಶಾಲನಗರದ ಗಂಧದಕೋಠಿಯಲ್ಲಿ ನೂತನವಾಗಿ 4.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ 20 ಸಾವಿರ ಮಂದಿ ಭಾರತೀಯರ ಪೈಕಿ ಈಗಾಗಲೆ 14 ಸಾವಿರ ಮಂದಿಯನ್ನು ಭಾರತಕ್ಕೆ ಕರೆತರಲಾಗಿದ್ದು ಇದರ ಸಂಪೂರ್ಣ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲಬೇಕಿದೆ ಎಂದು ಅವರು ಶ್ಲಾಘಿಸಿದರು.
ವಿದ್ಯಾರ್ಥಿಗಳು ತರಗತಿಗಳಲ್ಲಿ ಸಮಾನತೆಗೆ ಒತ್ತು ನೀಡುವ ಮೂಲಕ ಶಿಕ್ಷಣ ವ್ಯವಸ್ಥೆಯ ಗೌರವವನ್ನು ಎತ್ತಿ ಹಿಡಿಯಬೇಕಿದೆ ಎಂದೂ ಅಪ್ಪಚ್ಚುರಂಜನ್ ಹೇಳಿದರು.
ವಿದ್ಯಾರ್ಥಿಗಳು ಪ್ರಪಂ‌ಚ ಜ್ಞಾನ ಬೆಳೆಸಿಕೊಳ್ಳುವುದು ಅಗತ್ಯ. ಪ್ರಸಕ್ತ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ವಾತಾವರಣವಿದೆ. ಡಿಜಿಟಲ್ ಲೈಬ್ರೆರಿ, ಉತ್ತಮ‌ ಶಿಕ್ಷಣ, ವಸತಿ ವ್ಯವಸ್ಥೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.‌ ಪೋಷಕರಿಗೆ, ಶಿಕ್ಷಕರಿಗೆ ವಿಧೇಯ, ವಿನಯವಂತರಾಗಿ ಶಿಕ್ಷಣಕ್ಕೆ ಒತ್ತು ನೀಡಿದಲ್ಲಿ‌ ಮುಂದಿನ ಭವಿಷ್ಯ ಉತ್ತಮವಾಗಿರಲಿದೆ ಎಂದರು.
ಕುಶಾಲನಗರ ಪ.ಪಂ. ಅಧ್ಯಕ್ಷ ಬಿ.ಜೈವರ್ಧನ್ ಮಾತನಾಡಿ, ಜಿಲ್ಲೆಯಲ್ಲಿ ಕುಶಾಲನಗರ ಪ್ರಮುಖ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದ್ದು, ಇದರ ಹಿಂದೆ ಶಾಸಕ ಅಪ್ಪಚ್ಚುರಂಜನ್ ಅವರ ಪರಿಶ್ರಮ‌ ಅಪಾರವಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ವ್ಯವಸ್ಥಾಪಕಿ ಕವಿತಾ, ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಶೀನಪ್ಪ ಮಾತನಾಡಿದರು.
ಕುಶಾಲನಗರ ಪಪಂ‌ ಉಪಾಧ್ಯಕ್ಷೆ ಸುರಯ್ಯಾಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿ ಸ್ವಾಮಿ‌, ಗೃಹ ಮಂಡಳಿ ಅಭಿಯಂತರರಾದ ಮಹೇಶ್, ಕೃಷ್ಣಪ್ಪ, ನಿಲಯ ಮೇಲ್ವಿಚಾರಕ ಶ್ರೀಕಾಂತ್, ಮಾದಾಪುರ ಮೊರಾರ್ಜಿ ದೇಸಾಯಿ ಶಾಲಾ ಪ್ರಾಂಶುಪಾಲ ಲೋಕೇಶ್ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!