ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಷ್ಟ್ರ ರಾಜಧಾನಿಯ ‘ಕರ್ತವ್ಯಪಥ’ ಸಜ್ಜಾಗುತ್ತಿದ್ದು, ಈ ಬಾರಿಯ ಪಥಸಂಚಲನದಲ್ಲಿ ಕರ್ನಾಟಕದ ಸಾಂಸ್ಕೃತಿಕ ಮತ್ತು ತಾಂತ್ರಿಕ ವೈಭವ ಮೇಳೈಸಲಿದೆ.
ಈ ಬಾರಿಯ ಪರೇಡ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ರಾಜ್ಯದ ವಿವಿಧ ಜಿಲ್ಲೆಗಳ 12 ಎನ್‌ಸಿಸಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಒಟ್ಟು 200 ಮಂದಿಯ ಎನ್‌ಸಿಸಿ ತಂಡದಲ್ಲಿ ಸ್ಥಾನ ಪಡೆದಿರುವ ಇವರಲ್ಲಿ 6 ವಿದ್ಯಾರ್ಥಿನಿಯರು ಹಾಗೂ 6 ವಿದ್ಯಾರ್ಥಿಗಳು ಸೇರಿದ್ದಾರೆ. ಈಗಾಗಲೇ ಕರ್ತವ್ಯಪಥದಲ್ಲಿ ಕಠಿಣ ತರಬೇತಿ ಪೂರೈಸಿರುವ ಈ ಯುವ ಕೆಡೆಟ್‌ಗಳು, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಹೆಜ್ಜೆ ಹಾಕಲು ಕಾತುರದಿಂದ ಕಾಯುತ್ತಿದ್ದಾರೆ.
ಈ ಬಾರಿಯ ಕರ್ನಾಟಕದ ಸ್ತಬ್ಧಚಿತ್ರವು ಅತ್ಯಂತ ವಿಶಿಷ್ಟವಾದ ‘ಮಿಲೆಟ್ಸ್ ಟು ಮೈಕ್ರೋಚಿಪ್’ (ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ) ಎಂಬ ಪರಿಕಲ್ಪನೆಯನ್ನು ಹೊಂದಿದೆ. ಇದು ರಾಜ್ಯದ ಸಾಂಪ್ರದಾಯಿಕ ಕೃಷಿ ಉತ್ಪನ್ನಗಳು ಮತ್ತು ಜಾಗತಿಕ ಮಟ್ಟದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆಗಳನ್ನು ಪ್ರತಿಬಿಂಬಿಸಲಿದೆ. ‘ಆತ್ಮನಿರ್ಭರ ಭಾರತ’ದ ಕನಸಿಗೆ ಕರ್ನಾಟಕದ ಕೊಡುಗೆಯನ್ನು ಸಾರುವ ಈ ಸ್ತಬ್ಧಚಿತ್ರವು ಯಕ್ಷಗಾನ, ಕಂಸಾಳೆ ನೃತ್ಯದ ಲೋಗೋಗಳು ಹಾಗೂ ನಾಡಗೀತೆಯ ಧಾಟಿಯ ಹಿನ್ನೆಲೆ ಸಂಗೀತದೊಂದಿಗೆ ಕಣ್ಮನ ಸೆಳೆಯಲಿದೆ.



