ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ತಿಂಗಳಿನಲ್ಲಿ ಮನೆಯಲ್ಲಿ ಶುಭಕಾರ್ಯ ನಡೆಯಬೇಕಿತ್ತು. ಮದುವೆ ತಯಾರಿಯಲ್ಲಿದ್ದ ಕುಟುಂಬ ಒಂದೇ ರಾತ್ರಿಯಲ್ಲಿ ಮಣ್ಣಿನಡಿ ಹುದುಗಿ ಹೋಗಿದೆ..
ಇದು ಕೇರಳದ ವಯನಾಡಿನ ಮಣ್ಣಿನಡಿ ಅಡಗಿರುವ ದುರಂತ ಕಥೆ..
ವಯನಾಡಿನ ಶಿವಣ್ಣ-ಸಬೀತಾ ದಂಪತಿ ಮನೆಯಲ್ಲಿ ಒಟ್ಟು 7 ಮಂದಿ ಅನೋನ್ಯವಾಗಿದ್ದರು. ಹಿರಿಯ ಮಗಳು ಶ್ರುತಿ ಮದುವೆ ನಡೆಯಬೇಕಿದ್ದರಿಂದ ಮನೆಯಲ್ಲಿ ಗಿಜಿಗಿಜಿ ಸಂಭ್ರಮವಿತ್ತು. ಆದರೆ ಒಂದೇ ರಾತ್ರಿಯಲ್ಲಿ ಎಲ್ಲವೂ ಬದಲಾಗಿತ್ತು.
ವಯನಾಡಿನ ಭೂಕುಸಿತದ ಕೇಂದ್ರ ಚುರಲ್ಮಳದಲ್ಲಿರುವ ವೆಲ್ಲರ್ಮಲಾ ಶಾಲೆ ಬಳಿಯೇ ಶಿವಣ್ಣ ದಂಪತಿ ಮನೆ ಇತ್ತು. ರಾತ್ರಿ ಸುರಿದ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಇಡೀ ಮನೆಯೇ ಕಾಣದಂತಾಗಿದೆ. ಕುಟುಂಬದ ಏಳು ಮಂದಿ ನಾಪತ್ತೆಯಾಗಿದ್ದಾರೆ. ಇಷ್ಟೇ ಅಲ್ಲದೆ ಶಿವಣ್ಣನ ಮನೆ ಗಟ್ಟುಮುಟ್ಟಾಗಿದೆ ಎಂದು ನಂಬಿ ಬಂದ ಪಕ್ಕದ ಮನೆಯ ಕುಟುಂಬ ಕೂಡ ಕಾಣೆಯಾಗಿದೆ.
ಶಿವಣ್ಣರ ಕಿರಿಯ ಪುತ್ರಿ ಶ್ರೇಯಾ ಶವವಾಗಿ ಸಿಕ್ಕಿದ್ದಾಳೆ. ಮದುಮಗಳು ಶ್ರುತಿ ಹೇಗೋ ಪ್ರಾಣ ಸಂಕಟಕ್ಕೆ ಸಿಲುಕಿ ಅಪಾಯದಿಂದ ಪಾರಾಗಿದ್ದು, ತಂಗಿ ಶವ ನೋಡಿ ಕಣ್ಣೀರು ಇಡುತ್ತಿದ್ದಾಳೆ. ಅಪ್ಪ ಅಮ್ಮ ಎಲ್ಲಿದ್ದಾರೆ ಶ್ರೇಯಾ ಎಂದು ಬಿಕ್ಕಿಬಿಕ್ಕಿ ಅತ್ತಿದ್ದಾಳೆ.
ಕೋಝಿಕೋಡ್ನ ಮಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ತಂಗಿಯ ಶವದ ಮುಂದೆ ರೋದಿಸುತ್ತಿದ್ದು, ಅಪ್ಪ, ಅಮ್ಮ, ಅಜ್ಜಿ, ಅಜ್ಜನ ಬರುವಿಕೆಗಾಗಿ ಕಾಯುತ್ತಿದ್ದಾಳೆ. ಆದರೆ ಇಲ್ಲಿಯವರೆಗೆ ಕಾಣೆಯಾಗಿರುವ ಇವರ ಕುಟುಂಬದ ಬಗ್ಗೆ ಮಾಹಿತಿಯೇ ಇಲ್ಲ ಎಂದು ವರದಿಯಾಗಿದೆ.