ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತೀಯ ಕೋಸ್ಟ್ ಗಾರ್ಡ್ ನಡೆಸುತ್ತಿರುವ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶದ ಪರೀಕ್ಷಾರ್ಥ ಹಾರಾಟ ಈ ಕುರಿತು ಅರಿವಿಲ್ಲದ ಸ್ಥಳೀಯರ ಆತಂಕಕ್ಕೆ ಕಾರಣವಾದ ಘಟನೆ ನಗರದಲ್ಲಿ ನಡೆದಿದೆ.
ನಗರದ ಟ್ಯಾಗೋರ್ ಕಡಲ ತೀರ, ಮಾಲಾದೇವಿ ಕ್ರೀಡಾಂಗಣ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿದ ಹೆಲಿಕಾಪ್ಟರ್ ಕೆಳಗೆ ಇಳಿಸಲು ಪ್ರಯತ್ನ ನಡೆಸಿ ಮತ್ತೆ ಮೇಲಕ್ಕೆ ಹಾರುತ್ತಿರುವುದು ಕಂಡು ಬಂದ ಕಾರಣ ಸುತ್ತ ಮುತ್ತಲಿನ ಜನ ಕೆಲವು ಸಮಯ ಆತಂಕಕ್ಕೆ ಒಳಗಾಗಿ ಭಯಭೀತರಾಗಿದ್ದು ಕಂಡು ಬಂತು.
ಹೆಲಿಕಾಪ್ಟರ್ ಏಕೆ ಈ ರೀತಿ ಹಾರುತ್ತಿದೆ ಎಂದು ಗೊಂದಲಕ್ಕೀಡಾದ ಜನ ಪರಸ್ಪರ ಚರ್ಚೆ ನಡೆಸುತ್ತಿದ್ದು ಕೆಲವು ಉಹಾಪೋಹಗಳಿಗೆ ಸಹ ಕಾರಣವಾಯಿತು.
ಈ ಕುರಿತು ಕೋಸ್ಟ್ ಗಾರ್ಡ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಆಧುನಿಕ ಲೈಟ್ ಹೆಲಿಕಾಪ್ಟರ್ ತುರ್ತು ಸಂದರ್ಭದಲ್ಲಿ ಎಲ್ಲಿ ಹೇಗೆ ಕೆಳಗೆ ಇಳಿಸಬಹುದು ಎನ್ನುವ ಪರೀಕ್ಷೆ ನಡೆಸಲಾಗುತ್ತಿದ್ದು ಕಾರವಾರ ಅಂಕೋಲಾ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪರೀಕ್ಷಾರ್ಥ ಹಾರಾಟ ನಡೆಯಲಿದೆ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.