January19, 2026
Monday, January 19, 2026
spot_img

ಏನಪ್ಪಾ ಇದು..! ಕಣ್ಣು ಮಿಟುಕಿಸುವಷ್ಟರಲ್ಲಿ ಹಾದು ಹೋಯ್ತು ರೈಲು: ಚೀನಾದ ಮತ್ತೊಂದು ಐತಿಹಾಸಿಕ ಹೆಜ್ಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾರಿಗೆ ತಂತ್ರಜ್ಞಾನದಲ್ಲಿ ಚೀನಾ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಕೇವಲ ಎರಡು ಸೆಕೆಂಡುಗಳಲ್ಲೇ ಗಂಟೆಗೆ 700 ಕಿಲೋಮೀಟರ್ ವೇಗವನ್ನು ತಲುಪುವ ಮೂಲಕ ಚೀನಾದ ಅತ್ಯಾಧುನಿಕ ಮ್ಯಾಗ್ಲೆವ್ ರೈಲು ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಕಣ್ಣು ಮಿಟುಕಿಸುವಷ್ಟರಲ್ಲಿ ಹಾದುಹೋಗುವ ಈ ರೈಲು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಸೂಪರ್‌ಫಾಸ್ಟ್ ಮ್ಯಾಗ್ಲೆವ್ ರೈಲಿನ ಪ್ರಯೋಗಾತ್ಮಕ ಪರೀಕ್ಷೆ ನಡೆಸಿದರು. ಸುಮಾರು ಒಂದು ಟನ್ ತೂಕವಿರುವ ರೈಲನ್ನು 400 ಮೀಟರ್ ಉದ್ದದ ವಿಶೇಷ ಮ್ಯಾಗ್ಲೆವ್ ಹಳಿಯಲ್ಲಿ ಪ್ರಯೋಗಿಸಲಾಯಿತು. ಅತ್ಯಂತ ಕಡಿಮೆ ಸಮಯದಲ್ಲಿ ಗರಿಷ್ಠ ವೇಗ ತಲುಪಿದ ನಂತರ, ಸುರಕ್ಷಿತವಾಗಿ ರೈಲನ್ನು ನಿಲ್ಲಿಸಲಾಗಿದ್ದು, ಪರೀಕ್ಷೆ ಯಶಸ್ವಿಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ:

ಈ ರೈಲು ಸೂಪರ್ ಕಂಡಕ್ಟಿಂಗ್ ಆಯಸ್ಕಾಂತ ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಹಳಿಯನ್ನು ಸ್ಪರ್ಶಿಸದೇ ಗಾಳಿಯಲ್ಲಿ ತೇಲುವಂತೆ ಸಾಗುತ್ತದೆ. ಪರಿಣಾಮ ಘರ್ಷಣೆ ಅತಿ ಕಡಿಮೆಯಾಗಿದ್ದು, ಅಸಾಧಾರಣ ವೇಗ ಸಾಧಿಸಲು ಸಾಧ್ಯವಾಗಿದೆ. ಸಂಶೋಧಕರ ಪ್ರಕಾರ, ಇಂತಹ ವೇಗವರ್ಧನೆ ರಾಕೆಟ್ ಉಡಾವಣೆಯ ಶಕ್ತಿಗೆ ಸಮಾನವಾಗಿದೆ.

ಭವಿಷ್ಯದಲ್ಲಿ ಈ ತಂತ್ರಜ್ಞಾನ ಬಳಕೆಯಿಂದ ದೂರದ ನಗರಗಳನ್ನು ಕೆಲವೇ ನಿಮಿಷಗಳಲ್ಲಿ ಸಂಪರ್ಕಿಸುವ ಸಾಧ್ಯತೆ ಇದೆ. ಚೀನಾದ ಈ ಸಾಧನೆ ಜಾಗತಿಕ ಸಾರಿಗೆ ಕ್ಷೇತ್ರದಲ್ಲಿ ಹೊಸ ದಿಕ್ಕು ತೋರಿಸಿದೆ.

Must Read