ಬಡವರ ಮಿತ್ರ ‘ಎರಡು ರೂಪಾಯಿ ಡಾಕ್ಟರ್’ ಡಾ. ಎ.ಕೆ. ರೈರು ಗೋಪಾಲ್ ಇನ್ನಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಡವರಿಗಾಗಿ ತಮ್ಮ ಸಂಪೂರ್ಣ ಜೀವನವನ್ನು ಸಮರ್ಪಿಸಿಕೊಂಡಿರುವ ‘ಎರಡು ರೂಪಾಯಿ ಡಾಕ್ಟರ್’ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಕಣ್ಣೂರಿನ ಹಿರಿಯ ವೈದ್ಯ ಡಾ. ಎ.ಕೆ. ರೈರು ಗೋಪಾಲ್ (ವಯಸ್ಸು 80) ಭಾನುವಾರ ನಿಧನರಾಗಿದ್ದಾರೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ದುಬಾರಿ ಚಿಕಿತ್ಸೆಯ ಯುಗದಲ್ಲೂ, ಅವರು ಬಡವರಿಗೆ ಹಿತಚಿಂತಕರಾಗಿ ಸೇವೆ ಸಲ್ಲಿಸಿದ್ದರು.

ಪ್ರಾರಂಭದಲ್ಲಿ ಕೇವಲ 2 ಶುಲ್ಕದಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದ ಅವರು, ನಂತರ 40 ರಿಂದ 50 ರೂಪಾಯಿ ಶುಲ್ಕವನ್ನಷ್ಟೆ ವಿಧಿಸುತ್ತಿದ್ದರು. ಈ ವಿನಮ್ರತೆ ಹಾಗೂ ಸಮರ್ಪಣಾ ಭಾವನೆ ಅವರ ಜನಪ್ರಿಯತೆಗೆ ಕಾರಣವಾಯಿತು. ಪ್ರತಿದಿನದಂತೆ ಅವರು 300ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು.

ಬೆಳಗಿನ ಜಾವ 2:15ರಲ್ಲಿಯೇ ಎದ್ದು ತಮ್ಮ ಹಸುಗಳನ್ನು ನೋಡಿಕೊಳ್ಳುತ್ತಿದ್ದರು, ಕೊಟ್ಟಿಗೆಯಲ್ಲಿ ಕೆಲಸ ಮುಗಿಸಿ, ಪ್ರಾರ್ಥನೆ ನಡೆಸಿದ ನಂತರ ತಮ್ಮ ಮನೆಯಲ್ಲಿಯೇ ಬೆಳಿಗ್ಗೆ 6:30ರಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ತಮ್ಮ ಪತ್ನಿ ಡಾ. ಶಕುಂತಲಾ ಮತ್ತು ಸಹಾಯಕರೊಂದಿಗೆ ಅವರು ದಿನನಿತ್ಯದ ಜನಸಂದಣಿಯನ್ನು ಸುಗಮವಾಗಿ ನಿರ್ವಹಿಸುತ್ತಿದ್ದರು.

ಅವರ ತಂದೆ ಡಾ. ಎ. ಗೋಪಾಲನ್ ನಂಬಿಯಾರ್ ಅವರಿಂದ ಸ್ಫೂರ್ತಿ ಪಡೆದ ಗೋಪಾಲ್ ಅವರು, ವೈದ್ಯಕೀಯ ಕ್ಷೇತ್ರವನ್ನು ಹಣಕಾಸು ಪ್ರೇರಿತವಾಗಿಸದೆ, ಶುದ್ಧ ಸೇವೆಯಾಗಿ ರೂಪಿಸಿಕೊಂಡಿದ್ದರು. ಯಾವುದೇ ಔಷಧ ಕಂಪನಿಗಳ ಪ್ರಭಾವಕ್ಕೂ ಮಣಿಯದೆ ಕಡಿಮೆ ಬೆಲೆಯ ಪರಿಣಾಮಕಾರಿ ಔಷಧಿಗಳನ್ನಷ್ಟೆ ರೋಗಿಗಳಿಗೆ ನೀಡುತ್ತಿದ್ದರು.

ಡಾ. ಗೋಪಾಲ್‌ ಅವರ ಸಹೋದರರಾದ ಡಾ. ವೇಣುಗೋಪಾಲ್ ಮತ್ತು ಡಾ. ರಾಜಗೋಪಾಲ್ ಕೂಡ ಅವರ ದಾರಿಯಲ್ಲೇ ನಡೆದಿದ್ದರು. ಒಂದು ಕುಟುಂಬವೇ ಸೇವೆಯ ಸಂಕೇತವಾಗಿ ಕಣ್ಣೂರಿನಲ್ಲಿ ಹೆಸರು ಮಾಡಿದೆ. ಅವರ ನಿಧನವು ಕೇವಲ ವೈದ್ಯಕೀಯ ಕ್ಷೇತ್ರಕ್ಕಷ್ಟೇ ಅಲ್ಲ, ಬಡವರ ಹಕ್ಕುಗಳಿಗಾಗಿ ಹೋರಾಡುವ ಎಲ್ಲರಿಗೂ ತುಂಬಲಾರದ ನಷ್ಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!