September 27, 2026
Sunday, September 27, 2026
spot_img

ಅಲ್ಪಸಂಖ್ಯಾತ ಮುಸ್ಲಿಮರ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಒಕ್ಕೂಟ ಜವಾಬ್ದಾರಿ ವಹಿಸಲಿ: ಶಾಸಕ ಇಕ್ಬಾಲ್ ಹುಸೇನ್

ಹೊಸದಿಗಂತ, ರಾಮನಗರ:


ಅಲ್ಪಸಂಖ್ಯಾತರ ಮುಸ್ಲಿಮರ ಮಕ್ಕಳ ಶೈಕ್ಷಣಿಕ ಮಟ್ಟ ತೀರಾ ಕಡಿಮೆ ಇರುವುದು ಕಳವಳಕಾರಿ ಸಂಗತಿ. ಆ ಸಮುದಾಯದ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಅಲ್ಪಸಂಖ್ಯಾತ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಜವಾಬ್ದಾರಿ ಹೊರಬೇಕು ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸಲಹೆ ನೀಡಿದರು.


ನಗರದ ಜೇನುಕಲ್ಲು ರೆಸಾರ್ಟ್ ನಲ್ಲಿ ಭಾನುವಾರ ಅಲ್ಪಸಂಖ್ಯಾತರ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲೆಯಿಂದ ಹೊರಗುಳಿದ ಅಲ್ಪಸಂಖ್ಯಾತ ಮಕ್ಕಳನ್ನು ಗುರುತಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಇದನ್ನು ಒಕ್ಕೂಟ ಸವಾಲಾಗಿ ಸ್ವೀಕಾರ ಮಾಡಬೇಕು ಎಂದರು.


ಶಿಕ್ಷಣ ಸಂಸ್ಥೆಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಬಾರದು. ಹಿಂದುಳಿದ, ಬಡ ವಿದ್ಯಾರ್ಥಿಗಳಿಗೆ ಜ್ಞಾನದ ಬಾಗಿಲು ತೆರೆಯಬೇಕು. ಬಡವರು, ದೀನ ದಲಿತರು ಸೇರಿದಂತೆ ಯಾವುದೇ ಒಂದು ವರ್ಗದ ಮಗುವೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.


ಈಗಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅಣಿಗೊಳಿಸಬೇಕಿದೆ. ಆದರೆ, ಅಲ್ಪಸಂಖ್ಯಾತ ವರ್ಗದ ಮಕ್ಕಳು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯದಿದ್ದರೆ ಸಮಾಜದಲ್ಲಿ‌ ಸೂಕ್ತ ಸ್ಥಾನ ಮಾನ ಸಿಗುವುದಿಲ್ಲ ಎಂಬುದನ್ನು ಅರಿತು ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಜವಾಬ್ದಾರಿಯನ್ನು ಅಲ್ಪಸಂಖ್ಯಾತ ‌ಶಿಕ್ಷಣ ಸಂಸ್ಥೆಗಳು ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.


ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಶ್ರಮಕ್ಕೆ ಶ್ಲ್ಯಾಘನೆ


ಸರ್ಕಾರಗಳ ನಯಾ ಪೈಸೆ ಅನುದಾನ ಇಲ್ಲದಿದ್ದರೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ, ಸಾವಿರಾರು ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಉದ್ಯೋಗ ಕಲ್ಪಿಸುವಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ನಿಸ್ವಾರ್ಥ ಶ್ರಮ ಶ್ಲಾಘನೀಯ. ಸಬಲೀಕರಣದ ಅಂತಿಮ ಅಸ್ತ್ರ ಶಿಕ್ಷಣವೇ ಆಗಿದೆ. ಈ ದಿನ ಕೇವಲ ಒಂದು ಒಕ್ಕೂಟದ ಆರಂಭ ದಿನವಷ್ಟೇ ಆಗಬಾರದು. ಈ ಒಕ್ಕೂಟವು ಶಿಕ್ಷಣ ಕ್ಷೇತ್ರದ ಬೆಳವಣಿಗೆ ಮತ್ತು ಶಿಕ್ಷಣದ ರಕ್ಷಣಾ ಕವಚವಾಗಲಿ ಎಂದು ಶುಭ ಹಾರೈಸಿದರು. ರಾಜ್ಯಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರಾಮುಖ್ಯತೆ ನೀಡುತ್ತಿದೆ. ಇಷ್ಟೇ ಅಲ್ಲದೆ, ಅಲ್ಪಸಂಖ್ಯಾತರ ಶಿಕ್ಷಣದಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಅಲ್ಪಸಂಖ್ಯಾತ ಶಿಕ್ಷಣ ದೃಷ್ಟಿಕೋನ ಸಮಿತಿ (ಕರ್ನಾಟಕ ಮೈನಾರಿಟಿ ಎಜುಕೇಶನ್ ವಿಷನ್ ಗ್ರೂಪ್) ರಚನೆ ಮಾಡಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.


ಸಮಸ್ಯೆಗಳ ಪರಿಹಾರಕ್ಕೆ ಒಕ್ಕೂಟ ವೇದಿಕೆಯಾಗಲಿ :


‍ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಕೊಡುಗೆ ಮಹತ್ವದ್ದಾಗಿದೆ. ಇಂತಹ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಪರಿಹರಿಸಿಕೊಳ್ಳಲು ಅಲ್ಪಸಂಖ್ಯಾತರ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಉತ್ತಮ ವೇದಿಕೆಯಾಗಲಿ ಎಂದು ಶುಭ ಕೋರಿದರು. ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ, ಶಿಕ್ಷಕರ ಹಿತಾಸಕ್ತಿ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆಸಂಬಂಧಿಸಿದ ವಿಚಾರಗಳಲ್ಲಿ ಒಕ್ಕೂಟ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ. ಸಂಸ್ಥೆಗಳ ನ್ಯಾಯಯುತ ಬೇಡಿಕೆಗಳಿಗೆ ಅಗತ್ಯವಿರುವ ಬೆಂಬಲ ನೀಡಲು ನಾನಾ ಸದಾ ಸಿದ್ಧನಿದ್ದೇನೆ. ಈ ಒಕ್ಕೂಟವು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಬಲ ನೀಡಲಿ ಎಂದು ಹೇಳಿದರು.


ಒಕ್ಕೂಟದ ಅಧ್ಯಕ್ಷ ಅಜ್ಗರುಲ್ಲಾ ಮಾತನಾಡಿ, ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ನಡೆಸುತ್ತಿರುವ 40 ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸೇರಿ ಒಕ್ಕೂಟ ರಚನೆ ಮಾಡಿರುವುದು, ಶಿಕ್ಷಣ ಕ್ಷೇತ್ರದಲ್ಲಿ ಸಿಗುವ ನಮ್ಮ ಹಕ್ಕುಗಳನ್ನು ಪಡೆಯಲು ಒಗ್ಗಟ್ಟಿನ ಸಂಕೇತವಾಗಿದೆ. ನಮ್ಮ ಸಮುದಾಯದ ಶಿಕ್ಷಣ ಸಂಸ್ಥೆಗಳು ಸಹ ಇತರರಿಗೆ ಮಾದರಿಯಾಗಿ ಮಕ್ಕಳಿಗೆ ಶಿಕ್ಷಣ ಕೊಡುವ ಸಂಸ್ಥೆಗಳಾಗಿ ಹೊರಹೊಮ್ಮುವ ಕೆಲಸ ಮಾಡಲಿದೆ ಎಂದು ತಿಳಿಸಿದರು.


ಕ್ಯಾಮ್ಸ್ ನ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ರವರು ಶಿಕ್ಷಣ ಸಂಸ್ಥೆಗಳ ಗೌರವ ಕಾಪಾಡುವಲ್ಲಿ ಶಿಕ್ಷಕರ ಪಾತ್ರ ಕುರಿತು ಮಾತನಾಡಿದರು. ಇದೇ ವೇಳೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೂ ಸಹ ರಾಜ್ಯ ಮಟ್ಟದ ಅವಾರ್ಡ್ ಕೊಡುವ ವ್ಯವಸ್ಥೆ ಆಗಬೇಕೆಂಬ ಮನವಿಯನ್ನು ಒಕ್ಕೂಟದ ಪದಾಧಿಕಾರಿಗಳು ಶಾಸಕರಿಗೆ ಸಲ್ಲಿಸಿದರು‌.


ವೇದಿಕೆಯಲ್ಲಿ ಪ್ರಾಧ್ಯಾಪಕ ಡಾ. ಕೆ. ಫಕ್ರುದ್ದೀನ್, ಒಕ್ಕೂಟದ ಕಾರ್ಯದರ್ಶಿ ಅಲ್ತಾಫ್ ಅಹ್ಮದ್ , ಖಜಾಂಚಿ ಗುಲಾಂ ಖ್ವಾಜಾ, ಬಾಲು ಪಬ್ಲಿಕ್ ಶಾಲೆಯ ವೆಂಕಟಸುಬ್ಬಯ್ಯ ಚೆಟ್ಟಿ, ರಹತುಲ್ಲಾ ಷರೀಫ್, ಸೈಯದ್ ತಲ್ಹಾ ಪಾಷಾ, ಅಲ್ಲಾಬಾಸ್ ಘೋರಿ, ಸೈಯದ್ ಶಾಜಿಯಾ ಮತ್ತಿತರರು ಉಪಸ್ಥಿತರಿದ್ದರು.

Must Read