ಶ್ರೀ ರಾಮನ ದರುಶನಕ್ಕೆ ಸೈಕಲ್ ಏರಿ ಹೊರಟರು ಈ ಊರ ಯುವಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಜನವರಿ 22 ರಂದು ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಹಾಗೂ ರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಈ ಒಂದು ದಿನಕ್ಕಾಗಿ ಕೋಟ್ಯಾಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಭಕ್ತರು ರಾಮ ಮಂದಿರದತ್ತ ಹೆಜ್ಜೆ ಇಡುತ್ತಿದ್ದು, ಅದೇ ರೀತಿ ಪಶ್ಚಿಮ ಬಂಗಾಳದ ಮಾಲ್ಡಾ ನಗರದ ರಾಮ ಭಕ್ತರಿಬ್ಬರು ಜನವರಿ 22 ರಂದು ನಡೆಯುವ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಸೈಕಲ್ ಏರಿ ಅಯೋಧ್ಯೆಯ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಪಶ್ಚಿಮ ಬಂಗಾಳದ ಮಾಲ್ಡಾ ನಗರದ ರವಿ ವಿಶ್ವಕರ್ಮ (30) ಮತ್ತು ಅಭಿಜಿತ್ ಬಾಸ್ಫೂರ್ (22) ಎಂಬವರು ಮಂಗಳವಾರದಂದು ಮಾಲ್ಡಾದಿಂದ ಅಯೋಧ್ಯೆಗೆ ರಾಮನ ದರ್ಶನಕ್ಕಾಗಿ ಸೈಕಲ್ ಮೂಲಕ ತೆರಳಿದ್ದಾರೆ. ಮಾಲ್ಡಾದಿಂದ ಅಯೋಧ್ಯೆಗೆ ಬರೋಬ್ಬರಿ 800 ಕಿಮೀ ಗಿಂತಲೂ ಹೆಚ್ಚು ದೂರವಿದ್ದು, ಇಬ್ಬರೂ ಸೈಕಲ್ ಮೂಲಕವೇ ಸುಮಾರು 800 ಕಿ.ಮೀ ಕ್ರಮಿಸಿ ಜನವರಿ 20 ರೊಳಗೆ ಆಯೋಧ್ಯೆ ತಲುಪುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಅವರು ಒಂದು ದಿನಕ್ಕೆ ಸರಾಸರಿ 30 ರಿಂದ 50 ಕಿಲೋಮೀಟರ್ ಗಳಷ್ಟು ಸೈಕ್ಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಮಂಗಳವಾರದಂದು ಬೆಳಗ್ಗೆ ಇಬ್ಬರೂ ಮಾಲ್ಡಾದ ಪ್ರಸಿದ್ಧ ಮಂಸ್ಕಮಾನ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಅಯೋಧ್ಯೆಯ ಕಡೆಗೆ ಪಯಾಣ ಬೆಳೆಸಿದ್ದಾರೆ. ಮಾಲ್ಡಾದಿಂದ ದಲ್ಖೋಲಾ, ಬಿಹಾರದ ಪೂರ್ಣಿಯಾ, ದಂಡಭಾಂಗಾ, ಉತ್ತರ ಪ್ರದೇಶದ ಗೋರಖ್ಪುರದ ಮೂಲಕ ಜನವರಿ 20 ರೊಳಗೆ ಅಯೋಧ್ಯೆಗೆ ತಲುಪಲಿದ್ದಾರೆ.

ʼಕೋಟ್ಯಾಂತರ ಭಕ್ತರ ರಾಮಮಂದಿರ ಸ್ಥಾಪನೆಯ ಬಹುದಿನದ ಕನಸು ಈಗ ನೆರವೇರುತ್ತಿದೆ. ಈ ಪವಿತ್ರ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾವು ಸೈಕಲ್ ಮೂಲಕವೇ ಅಯೋಧ್ಯೆಗೆ ತೆರಳಬೇಕೆಂದು ನಿರ್ಧರಿಸಿದ್ದೇವೆ. ಅಲ್ಲದೆ ಈ ಹಾದಿಯಲ್ಲಿ ಮಾದಕ ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಸಹ ಮಾಡಲಿದ್ದೇವೆʼ ಎಂದು ಆ ಇಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!