ಹೊಸದಿಗಂತ ವರದಿ ದಾವಣಗೆರೆ:
ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಮನೆಯಲ್ಲಿ ಕಳ್ಳರು 6.8 ಲಕ್ಷ ರೂ. ಮೌಲ್ಯದ ಚಿನ್ನ, 50 ಸಾವಿರ ರೂ. ನಗದು ದೋಚಿ ಪರಾರಿಯಾದ ಘಟನೆ ಜಿಲ್ಲೆಯ ಹರಿಹರದ ವಿದ್ಯಾನಗರದಲ್ಲಿ ನಡೆದಿದೆ.
ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಜಯನಾಯ್ಕ ಹರಿಹರದ ಮನೆಗೆ ಬೀಗ ಹಾಕಿ ನೈಟ್ ಡ್ಯೂಟಿಗೆ ಹೋಗಿದ್ದರು. ಕುಟುಂಬ ಸದಸ್ಯರು ಕೂಡ ಯುಗಾದಿ ಹಬ್ಬಕ್ಕೆಂದು ಊರಿಗೆ ಹೋಗಿದ್ದರು. ಈ ಸಂದರ್ಭ ಬಳಸಿಕೊಂಡು ಕಳ್ಳರು ಕೈಚಳಕ ತೋರಿದ್ದಾರೆ.
ರಾತ್ರಿ ಪಾಳಿ ಮುಗಿಸಿಕೊಂಡು ಬೆಳಿಗ್ಗೆ ಜಯನಾಯ್ಕ ಮನೆಗೆ ಬಂದಾಗ ಗೇಟ್ ಹಾಗೂ ಬಾಗಿಲಿನ ಇಂಟರ್ ಲಾಕ್ ಮುರಿದಿರುವುದು ಕಂಡುಬಂದಿದೆ. ಚಿನ್ನದ ಚೈನ್, ಉಂಗುರ, ಬ್ರಾಸ್ಲೇಟ್, ಕಿವಿ ಓಲೆ ಸೇರಿದಂತೆ ಒಟ್ಟು 60.5 ಗ್ರಾಂ ತೂಕದ ಚಿನ್ನ ಹಾಗೂ 50 ಸಾವಿರ ರೂ. ನಗದು ಹಣವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.