ಹೊಸದಿಗಂತ ವರದಿ,ಮುಂಡಗೋಡ:
ತಾಲೂಕಿನಲ್ಲಿನ ಕಳೆದ ೫-೬ ತಿಂಗಳಲ್ಲಿ ಲಕ್ಷಾಂತರ ರೂಪಾಯಿಯ ಶ್ರೀಗಂಧದ ಮರಗಳ ಕಳ್ಳತನಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ ರಾಜ್ಯದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ.
ಮಧ್ಯಪ್ರದೇಶ ರಾಜ್ಯದ ಜಲ್ಜಲಾ (೩೩), ಅಮಿತ್ ಪಾರ್ಧಿ (೫೦) ಮತ್ತು ಮಾಖನಸಿಂಗ್ ಪಾರ್ಧಿ(೫೫) ಬಂಧಿತ ಆರೋಪಿ ತರು.
ಇತ್ತೀಚೆಗೆ ಮುಂಡಗೋಡ ಪಟ್ಟಣ, ಅತ್ತಿವೇರಿ ಗ್ರಾಮೀಣ ಭಾಗದಲ್ಲಿ ಸೇರಿದಂತೆ ಕೆಲ ಕಡೆಗಳಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಶ್ರೀಗಂಧದ ಮರಗಳು ನಾಪತ್ತೆಯಾಗಿದ್ದವು. ಮರಗಳು ಕಳ್ಳತನ ಮಾಡಿಕೊಂಡು ಹೋದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಅರಣ್ಯ ಇಲಾಖೆಯವರು ಆರೋಪಿಗಳ ಪತ್ತೆಗಾಗಿ ಬಲೆಬೀಸಿದ್ದರು. ಯಲ್ಲಾಪುರದಲ್ಲಿ ಶ್ರೀಗಂಧದ ಮರಗಳನ್ನನು ಕಳ್ಳತನ ಮಾಡಿ ಜೈಲು ಸೇರಿದ್ದ ಈ ಗ್ಯಾಂಗ್ನವರು ಜಾಮೀನು ಪಡೆದು ಹೊರ ಬರುತ್ತಿದ್ದಂತೆಯೆ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮುಂಡಗೋಡ ತಾಲೂಕಿನಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ್ದ ಬಗ್ಗೆ ಆರೋಪಿಗಳನ್ನು ಅಧಿಕಾರಿ ಬಂಧಿಸಿದ್ದಾರೆ. ಆದರೆ ಕಳ್ಳತನ ಮಾಡಿರುವ ಬೆಲೆಬಾಳುವ ಶ್ರೀಗಂಧದ ಕಟ್ಟಿಗೆ ಎಲ್ಲಿದೆ? ಅರಣ್ಯ ಇಲಾಖೆಯವರು ಕಳ್ಳತನವಾದ ಕಟ್ಟಿಗೆಯನ್ನು ಮೊದಲು ವಶಕ್ಕೆ ಪಡೆಯಲಿ, ಹಾಗೂ ಕಟಿಂಗ್ ಮಾಡಿದ ಗ್ಯಾಂಗ್ನವರು ಮುಂಡಗೋಡದಲ್ಲಿ ಕಳ್ಳತನ ಮಾಡಿದ ಕಟ್ಟಿಗೆಯನ್ನು ಯಾರಿಗೆ ಮಾರಾಟ ಮಾಡಿದ್ದಾರೆ? ಕಟ್ಟಿಗೆ ಖರೀಧಿಸಿದ ಆರೋಪಿಯನ್ನು ಸಹ ವಶಕ್ಕೆ ಪಡೆದು ಸಮಗ್ರ ತನಿಖೆ ನಡೆಸಲಿ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಜಾಮೀನಿನ ಮೇಲೆ ಹೊರ ಬಂದ ತಕ್ಷಣವೇ ಇವರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ತಪ್ಪು ಮಾಡಿದರೆ ಇವರ ಮೇಲೆ ಕಾನೂನು ಕ್ರಮವಾಗಲಿ. ಆದರೆ ಈ ಪ್ರಕರಣದಿಂದ ಇಲಾಖೆಯವರು ಮುಕ್ತಿಯಾಗಲು ಈ ಆರೋಪಿಗಳನ್ನು ಬಲಿಪಶು ಮಾಡಿದರೇ? ಎಂಬ ಮಾತು ಕೇಳಿ ಬರುತ್ತಿದೆ.