ಭಾರತದಲ್ಲೂ ನೀಗ್ರೊಕ್ಕೆ ಹೋಲುವ ಜನರಿದ್ದಾರೆ: ಪಿತ್ರೋಡಾ ಹಾದಿ ಹಿಡಿದ ಅಧೀರ್ ರಂಜನ್ ಚೌಧರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ , ಸ್ಯಾಮ್ ಪಿತ್ರೋಡಾ ನೀಡಿದ್ದ ‘ಜನಾಂಗೀಯ’ ಹೇಳಿಕೆಯನ್ನು (Racist Comment) ಸಮರ್ಥಿಸಿಕೊಂಡಿದ್ದು, ಭಾರತದಲ್ಲೂ ಕಪ್ಪು ಚರ್ಮದವರನ್ನು (ನೀಗ್ರೊಗಳು) ಹೋಲುವ ಜನರಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ ಕಾಣುತ್ತಾರೆ ಎಂಬ ಸ್ಯಾಮ್​ ಪಿತ್ರೊಡಾ ಹೇಳಿಕೆಯು ಬಿಜೆಪಿಯಿಂದ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಚರ್ಮದ ಬಣ್ಣವನ್ನು ಆಧರಿಸಿ ಭಾರತೀಯರಿಗೆ ಅಗೌರವ ತೋರಿದೆ ಎಂಬ ಆರೋಪ ಮಾಡಿತ್ತು. ಅದರ ಬೆನ್ನಲ್ಲೇ ಚೌಧರಿ ತನ್ನ ಹೇಳಿಕೆ ನೀಡಿದ್ದಾರೆ.

ನಮ್ಮಲ್ಲಿ ಪ್ರೋಟೋ ಆಸ್ಟ್ರಲಾಯ್ಡ್ಗಳು, ಮಂಗೋಲಾಯ್ಡ್ಗಳು ಮತ್ತು ನೆಗ್ರಿಟೊ ವರ್ಗದ ಜನರಿದ್ದಾರೆ. ನಮ್ಮ ದೇಶದ ಜನರ ಪ್ರಾದೇಶಿಕ ಲಕ್ಷಣಗಳು ವಿಭಿನ್ನವಾಗಿವೆ. ಪಿತ್ರೋಡಾ ಅವರು ನೀಡಿರುವುದು ವೈಯಕ್ತಿಕ ಅಭಿಪ್ರಾಯ. ಅದರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದು ಚೌಧರಿ ಹೇಳಿದ್ದಾರೆ.

ಭಾರತದಲ್ಲಿ ಹಲವಾರು ಜನಾಂಗಗಳು ಇರುವುದನ್ನು ನಮಗೆ ಶಾಲೆಗಳಲ್ಲಿ ಕಲಿಸಲಾಗಿದೆ. ಎಲ್ಲರೂ ಒಂದೇ ರೀತಿ ಕಾಣುವುದಿಲ್ಲ. ಕೆಲವರು ಕಪ್ಪು ಹಾಗೂ ಇನ್ನುಳಿದವರು ಬಿಳಿ ಬಣ್ಣದವರು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ದಿ ಸ್ಟೇಟ್ಸ್​ಮನ್​​ಗೆ ಪಿತ್ರೋಡಾ ನೀಡಿದ್ದ ಸಂದರ್ಶನದ ಆಯ್ದ ಭಾಗವನ್ನು ಬುಧವಾರ ಪ್ರಸಾರ ಮಾಡಲಾಗಿತ್ತು. ಅದರಲ್ಲಿ ಅವರು ಭಾರತವನ್ನು ವೈವಿಧ್ಯಮಯ ದೇಶ. ಪೂರ್ವದ ಜನರು ಚೀನೀಯರಂತೆ ಕಾಣುತ್ತಾರೆ. ಉತ್ತರದ ಜನರು ಬಿಳಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ ಎಂದು ಹೇಳಿಕೆ ನೀಡಿದ್ದರು. ಪಿತ್ರೊಡಾ ಅವರ ವಿವಾದಾತ್ಮಕ ಹೇಳಿಕೆಯ ನಂತರ ಕಾಂಗ್ರೆಸ್ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಚರ್ಮದ ಬಣ್ಣದ ಆಧಾರದ ಮೇಲೆ ಅಗೌರವವನ್ನು ಸಹಿಸುವುದಿಲ್ಲ ಎಂದು ಟೀಕಿಸಿದ್ದರು.

ಈ ಹೇಳಿಕೆಯ ಕೆಲವೇ ಗಂಟೆಗಳ ನಂತರ ಪಿತ್ರೋಡಾ ಅವರು ಕಾಂಗ್ರೆಸ್ ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಪಿತ್ರೋಡಾ ಅವರ ಸ್ವಂತ ಇಚ್ಛೆಯಿಂದ ರಾಜೀನಾಮೆ ನೀಡಲಾಗಿದೆ ಎಂದು ಪಕ್ಷದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!