ರಾಜ್ಯದಲ್ಲಿದೆ ಕಾಂಗ್ರೆಸ್‌ ಪರ ಅಲೆ: ಡಾ.ಅಜಯ್ ಸಿಂಗ್

ಹೊಸದಿಗಂತ ವರದಿ, ಕಲಬುರಗಿ:

ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಜನರು ಕೇಂದ್ರದಲ್ಲಿ ಬಿಜೆಪಿಗೆ 10 ವರ್ಷ ಅಧಿಕಾರ ಕೊಟ್ಟು ಸಾಕಾಗಿದೆ.ಪಂಚ ಗ್ಯಾರಂಟಿಗಳು ಜನರಿಗೆ ತಲುಪಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೧೫ ರಿಂದ ೨೦ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೆಕೆಆರಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ ಸಿಂಗ್ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪ ಕೊಡುತ್ತೇವೆ ಎಂಬ ನಮ್ಮ ಗ್ಯಾರಂಟಿಗಳಿಗೆ ರೈತರು ಮನಸೋತಿದ್ದಾರೆ. ಹಳ್ಳಿಗಳಲ್ಲೆಲ್ಲಾ ಇದನ್ನು ಮಾತನಾಡುತ್ತ ಅವರೆಲ್ಲರೂ ಕೈ ಬಲಪಡಿಸಲು ಸಜ್ಜಾಗಿದ್ದಾರೆ ಎಂದು ತಿಳಿಸಿದರು.

ಮಹಿಳೆಯರ ಮಾಂಗಲ್ಯದ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿಯವರು ಇದೀಗ ಹಾಸನದಲ್ಲಿರುವ ತಮ್ಮ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಮೌನವಾಗಿದ್ದಾರೆ, ಹಾಸನಕ್ಕೆ ಬಂದು ಮತ ಯಾಚಿಸಿ ಹೋಗಿದ್ದಾರೆ, ಬಿಜೆಪಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಹೇಳಿದರು.

ನಾಳೆ ಜೇವರ್ಗಿಗೆ ಖರ್ಗೆ, ಸಿಎಂ ಹಾಗೂ ಡಿಸಿಎಂ 

ಜೇವರ್ಗಿ ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಮೇ.1ರಂದು ಬುಧವಾರ ಸಂಜೆ 5 ಗಂಟೆಗೆ ನಡೆಯಲಿುವ ಕಾಂಗ್ರೆಸ್‌ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಖಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಮಾಜಿ ಡಿಸಿಎಂ, ಅಥಣಿ ಶಾಸಕರಾದ ಲಕ್ಷ್ಮಣ ಸವದಿ, ಕಲ್ಯಾಣ ನಾಡಿನ ಸಚಿವರು ಶಾಸಕರು ಅನೇಕರು ಪಾಲ್ಗೊಳ್ಳುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಲೋಕಸಭಾ ಚುನಾವಣೆ ನಿಮಿತ್ಯ ಪ್ರಚಾರ ಸಭೆಗೆ ಆಗಮಿಸುತ್ತಿದ್ದು ಆದ ಕಾರಣ ಪಕ್ಷದ ಹಿರಿಯ ಮುಖಂಡರು ಯುವ ಕಾರ್ಯಕರ್ತರು ಮಹಿಳಾ ಘಟಕದ ಸದಸ್ಯರು ಸೇರಿದಂತೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪಾ ಕಮಕನೂರ, ನೀಲಕಂಠರಾವ್ ಮೂಲಗೆ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!