ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ಸಾರ್ವಜನಿಕ ವಿಚಾರಣೆಗೆ ಹಾಜರಾದ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿ ಬಿಜೆಪಿಯನ್ನು ಟೀಕಿಸಿದರು. ಇಂದಿನ ವಿಚಾರಣೆಗೆ ರಾಹುಲ್ ಗಾಂಧಿ ಕೂಡ ಹಾಜರಾಗಬೇಕಿತ್ತು ಆದರೆ ದೆಹಲಿಯಲ್ಲಿ ಅಖಿಲ ಭಾರತ ಸಭೆ ಇರುವುದರಿಂದ ಇಂದು ಬರಲು ಸಾಧ್ಯವಾಗಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ. ಅವರು ಕಾನೂನು ಪಾಲಿಸುವ ವ್ಯಕ್ತಿಯಾಗಿದ್ದು, ಮುಂದಿನ ವಿಚಾರಣೆಗೆ ಖಂಡಿತವಾಗಿಯೂ ಹಾಜರಾಗುತ್ತಾರೆ ಎಂದರು.
ನಂತರ ನೇರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ಸುಮ್ಮನಿದ್ದರೂ ಬಿಜೆಪಿ ನಾಯಕರು ದೂರುತ್ತಾರೆ ಆದರೆ ನಾವು ಸುಮ್ಮನಿರುವುದಿಲ್ಲ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದನ್ನು ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯವ್ಯಾವ ಹುದ್ದೆಗೆ ಎಷ್ಟೆಷ್ಟು ಲಂಚ ನೀಡಬೇಕಿತ್ತು ಅಂತ ಪತ್ರಿಕೆಗಳಲ್ಲಿ ವರದಿಯಾದ ಅಂಶಗಳ ಆಧಾರದಲ್ಲೇ ಕಾಂಗ್ರೆಸ್ ಆಗಿನ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಕಮೀಶನ್ ಸರ್ಕಾರ ಅಂತ ಹೇಳಿದ್ದು ಎಂದು ಶಿವಕುಮಾರ್ ಹೇಳಿದ್ದಾರೆ.