Tuesday, December 2, 2025

ಯಾವುದೇ ಗೊಂದಲವೂ ಇಲ್ಲ, ಭಿನ್ನಾಭಿಪ್ರಾಯವೂ ಇಲ್ಲ : ಕಾಂಗ್ರೆಸ್ ಒಳಜಗಳದ ವದಂತಿಗಳಿಗೆ ಪ್ರಿಯಾಂಕ್ ಖರ್ಗೆ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಕಾಂಗ್ರೆಸ್ ಪಕ್ಷದೊಳಗಿನ ನಾಯಕತ್ವ ಬದಲಾವಣೆ ಮತ್ತು ಒಳಜಗಳದ ಕುರಿತಾಗಿ ಹರಡುತ್ತಿರುವ ಎಲ್ಲ ವದಂತಿಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟ ಹಾಗೂ ತೀಕ್ಷ್ಣ ಉತ್ತರ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಯಾವುದೇ ಗೊಂದಲವೂ ಇಲ್ಲ, ಭಿನ್ನಾಭಿಪ್ರಾಯವೂ ಇಲ್ಲ ಎಂದು ಖಡಕ್ ಧಾಟಿಯಲ್ಲಿ ಹೇಳಿದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಡುವೆಯೂ ಯಾವುದೇ ವೈಷಮ್ಯ ಇಲ್ಲವೆಂದು ಇಬ್ಬರೂ ಮಾಧ್ಯಮಗಳ ಮುಂದೆ ಈಗಾಗಲೇ ಸ್ಪಷ್ಟಪಡಿಸಿರುವುದಾಗಿ ಅವರು ನೆನಪಿಸಿದರು. ಪಕ್ಷದಲ್ಲಿ ಶಾಂತಿಯ ವಾತಾವರಣ ಇದೆ. ಅದನ್ನು ಕದಡುವ ಪ್ರಯತ್ನ ಯಾರಿಂದಲೂ ನಡೆಯಬಾರದು ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.

ಇತ್ತೀಚೆಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಭೇಟಿಗೆ ನಾಯಕತ್ವ ಬದಲಾವಣೆ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂಬಂಧವಾಗಿ ತಮಗೆ ಯಾರೂ ಜವಾಬ್ದಾರಿ ನೀಡಿಲ್ಲ ಎನ್ನುವುದನ್ನೂ ಖಚಿತಪಡಿಸಿದರು.

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರಿಂದಲೂ ಮಧ್ಯಸ್ಥಿಕೆಯ ಯಾವುದೇ ಹೊಣೆಗಾರಿಕೆ ನನಗೆ ನೀಡಿಲ್ಲ ಎಂದರು. ಪಕ್ಷದ ಹಿರಿಯ ನಾಯಕರು ಅಗತ್ಯವಾದ ವಿಷಮಾನಗಳನ್ನು ತಾವೇ ನಿರ್ವಹಿಸಿಕೊಳ್ಳುತ್ತಾರೆ, ಅದರಲ್ಲಿ ನನ್ನ ಪಾತ್ರವಿದೆ ಎಂಬ ಸುದ್ದಿಗಳು ಹೇಗೆ ಹುಟ್ಟುತ್ತವೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

error: Content is protected !!