ಉಗ್ರರಿಗೂ ನಿಮಗೂ ಯಾವುದೇ ವ್ಯತ್ಯಾಸವಿಲ್ಲ: ‘ಕೈ’ ಮುಖಂಡನ ವಿರುದ್ಧ ಅಶೋಕ್ ಕೆಂಡಾಮಂಡಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್‌ ಭಯೋತ್ಪಾದಕ ದಾಳಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಾಂಗ್ರೆಸ್‌ ಮುಖಂಡ ಎಂ. ಲಕ್ಷ್ಮಣ್‌ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಆರ್‌.ಅಶೋಕ್, ಪಾಕಿಸ್ತಾನದ ಹೆಡೆಮುರಿ ಕಟ್ಟಬಹುದು. ಆದರೆ, ದೇಶದ್ರೋಹಿ ಕಾಂಗ್ರೆಸ್ ನಾಯಕರ ಹರಕಲು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಐಡಿ ಕಾರ್ಡ್ ನೋಡಿ, ಧರ್ಮದ ಹೆಸರು ಕೇಳಿ, ಕಲ್ಮಾ ಹೇಳಿಸಿ, ಪ್ಯಾಂಟು ಬಿಚ್ಚಿ ಪರೀಕ್ಷಿಸಿ ಮತಾಂಧ ಉಗ್ರರು ತಮ್ಮ ಕಣ್ಣೆದುರಿಗೇ ಪಾಯಿಂಟ್ ಬ್ಲ್ಯಾಂಕ್‌ನಲ್ಲಿ ತಲೆಗೆ ಗುಂಡಿಕ್ಕಿ ಕೊಂದಿದ್ದು, ಪತಿಯನ್ನು, ತಂದೆಯನ್ನು ಕಳೆದುಕೊಂಡು ಕಣ್ಣೀರಿನ ಕಥೆ ಹೇಳುತ್ತಿರುವ ಸಂತ್ರಸ್ತ ಮಹಿಳೆಯರು, ಮಕ್ಕಳ ಆಕ್ರಂದನ ನಿಮಗೆ ಕೇಳುತ್ತಿಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ನಿಮ್ಮ ಭಂಡ ಬಾಳಿಗೆ ಏನು ಹೇಳೋಣ. ಧರ್ಮದ ಹೆಸರು ಕೇಳಿ ಕೊಲ್ಲುವ ಉಗ್ರರಿಗೂ, ಸೇನಾಪಡೆಗಳ ಕಾರ್ಯಾಚರಣೆಗೆ ಸಾಕ್ಷಿ ಕೇಳುವ ನಿಮಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಹಾರ ಸೇರಿದಂತೆ ಐದಾರು ರಾಜ್ಯಗಳಲ್ಲಿ ಚುನಾವಣೆ ಬರ್ತಾ ಇದೆ. ಈ ಕಾರಣಕ್ಕೆ ಇಂತಹ ಕೃತ್ಯ ಬಿಜೆಪಿಯವರೇ ನಡೆಸಿರಬಹುದಾ ಎಂಬ ಅನುಮಾನ ಮೂಡಿದೆ ಎಂದು ಲಕ್ಷ್ಮಣ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಜೊತೆಗೆ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ನೀವು ಹಿಂದುನಾ ಎಂದು ಕೇಳಿ ಕೇಳಿ ಕೊಂದಿದ್ದಾರೆ ಎನ್ನುವುದು ಸುಳ್ಳು. ಇದೊಂದು ಅಪಪ್ರಚಾರ ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!