ಹೊಸದಿಗಂತ ವರದಿ, ಬೀದರ್:
ತಾನು ಈಗಾಗಲೇ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ೭೦ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದು, ಈ ಬಾರಿ ಬಿಜೆಪಿ ರಾಜ್ಯದಲ್ಲಿ ೧೩೦ ಸೀಟು ಗೆಲ್ಲುವ ಮೂಲಕ ತನ್ನ ಶಕ್ತಿ ಮೇಲೆ ಸರ್ಕಾರ ರಚಿಸುವುದರಲ್ಲಿ ಅನುಮಾನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಬುಧವಾರ ನಗರದ ಗುಂಪಾ ರಸ್ತೆಯಲ್ಲಿರುವ ಬಸವ ಮುಕ್ತಿ ಮಂದಿರದಲ್ಲಿ ಬಿಜೆಪಿ ಉತ್ತರ ಕ್ಷೇತ್ರದ ಶಾಸಕ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಪರ ಮತಯಾಚನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದ ಅಭಿವೃದ್ಧಿಗಾಗಿ ಜನಪ್ರಿಯ ಯುವನಾಯಕ, ಹೋರಾಟದಿಂದ ಗುರ್ತಿಸಿಕೊಂಡ ಈಶ್ವರಸಿಂಗ್ ಠಾಕೂರ್ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಅಭಿವೃದ್ಧಿಗೆ ವ್ಯಾಪಕ ಅನುದಾನ ನೀಡಿದ್ದಾರೆ. ದೇಶದಲ್ಲಿ ಕರ್ನಾಟಕ ರಾಜ್ಯವನ್ನು ನಂಬರ್ ವನ್ ರಾಜ್ಯವನ್ನಾಗಿ ಮಾಡಲು ಪ್ರಧಾನಿಗಳ ಕೈ ಬಲಪಡಿಸಬೇಕಿದೆ. ತಾನು ಮುಖ್ಯಮಂತ್ರಿ ಆಗಿದ್ದಾಗ ಹೈದ್ರಾಬಾದ್ ಕರ್ನಾಟಕ ಎಂಬ ಹೆಸರು ಅಳಿಸಿ ಬಹು ದಿನಗಳ ಬೇಡಿಕೆಯಂತೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ ಕೆ.ಕೆ.ಆರ್.ಡಿ.ಬಿ ಗೆ ರು.೫ ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ಕೃಷ್ನಾ ಮೇಲ್ದಂಡೆ ಕಾಮಗಾರಿಗೆ ೫ ಸಾವಿರ ಕೋಟಿ, ನಂಜುಂಡಪ್ಪ ವರದಿ ಜಾರಿಗೆ ತರುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ ಎಂದರು.
ಬೀದರ್‌ನಲ್ಲಿ ವಾಯು ನಿಲ್ದಾಣ, ಬೀದರ್-ಬಳ್ಳಾರಿ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ದರ್ಜೆ ನೀಡಿ ಅಭಿವೃದ್ಧಿಪಡಿಸಲಾಗಿದೆ. ಬೀದರ್-ನಾಂದೇಡ್ ರೈಲ್ವೆ ಹಳಿ ಅಭಿವೃದ್ಧಿಪಡಿಸುವುದು, ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕಲಬುರಗಿಯಲ್ಲಿ ಸಂಪುಟ ಸಹುದ್ಯೋಗಿಗಳ ಸಭೆ ನಡೆಸಿ ಹಲವಾರು ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿದೆ ಎಂದರು.
ವಿಶ್ವಗುರು ಬಸವಣ್ನನವರ ಕರ್ಮಕ್ಷೇತ್ರ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪದ ನಿರ್ಮಾಣಕ್ಕೆ ೫೦೦ ಕೋಟಿ ಅನುದಾನ ಒದಗಿಸಲಾಗಿದೆ. ಭಾಗ್ಯಲಕ್ಷ್ಮೀ ಯೋಜನೆ ಅಡಿ ಹೆಣ್ಣು ಮಕ್ಕಳಿಗೆ ಈ ಯೋಜನೆ ವರದಾನವಾಗಿದೆ. ಹೀಗೆ ಹತ್ತಾರು ಯೋಜನೆಗಳು ಈ ಭಾಗಕ್ಕೆ ನೀಡಿದ್ದು ನಮ್ಮ ಪಕ್ಷದ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿoದ ಗೆಲ್ಲಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಬಿಪಿಎಲ್ ಕುಟುಂಬಕ್ಕೆ ನಿತ್ಯ ಅರ್ಧ ಲಿಟರ್ ನಂದಿನಿ ಹಾಲು, ಆಟಲ ಆಹಾರ ಕೇಂದ್ರಗಳ ಮೂಲಕ ೫ ಕೆ.ಜಿ ಸಿರಿಧಾನ್ಯ ಉಚಿತವಾಗಿ ನೀಡಲಾಗುತ್ತದೆ. ವಿಶ್ವೇಶ್ವರಯ್ಯ ವಿದ್ಯಾ ಯೋಜನೆ ಅಡಿ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವುದು, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದು, ಸೂರಿಲ್ಲದ ಕುಟುಂಬಗಳಿಗೆ ಮನೆ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಪಕ್ಷದ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಮಾತನಾಡಿ, ಕ್ಷೇತ್ರದ ಮತದಾರರು ತನಗೆ ಆಶಿರ್ವದಿಸಿದರೆ ಲವ್ ಜಿಹಾದ್ ನಡೆಯಲು ಬಿಡುವುದಿಲ್ಲ. ಕೈಗಾರಿಕೆ ಹಬ್ ಹಾಗೂ ಪ್ರವಾಸೋದ್ಯಮ ಹಬ್ ಸ್ಥಾಪಿಸಿ ಇಲ್ಲಿಯ ನಿರೂದ್ಯೋಗಿ ಯುವಜನರಿಗೆ ಉದ್ಯೋಗ ಒದಗಿಸಿ ಅವರ ತಂದೆ, ತಾಯಿಗಳ ಸೇವೆ ಮಾಡಿಕೊಂಡು ಇಲ್ಲಿಯೆ ಇರುವ ಹಾಗೆ ಮಾಡಲಾಗುವುದು. ಪೋಲಿಸ್‌ರಿಂದ ಒದೆ ತಿಂದು ವಿಶ್ವ ಪ್ರಸಿದ್ಧ ನರಸಿಂಹ ಝರಣಿ ದೇವಸ್ಥಾನದ ೧೧೪ ಎಕರೆ ಜಮಿನು ರಕ್ಷಣೆ ಮಾಡುವ ಹಾಗೂ ಸತ್ತ ಹೆಣವಾಗಿ ಬಿದ್ದರೂ ಛಲ ಬಿಡದೇ ಬಸವಕಲ್ಯಾಣ ನಾಗದೇವತೆ ರಕ್ಷಣೆ ಮಾಡಿರುವ ಹೆಮ್ಮೆ ಇದೆ. ಸಾರ್ವಜನಿಕರ ಸೇವೆಯೇ ನನ್ನ ಕುಟುಂಬದ ಸೇವೆ ಎಂದು ನಂಬಿ ೩೫ ವರ್ಷಗಳಿಂದ ಸೇವೆ ಮಾಡಿದ, ಸಾಮಾನ್ಯ ಶಿಕ್ಷಕ ಕುಟುಂಬದಿoದ ಬಂದವ ನನಗೆ ಪಕ್ಷ ಟಿಕೇಟ್ ನೀಡಿ ಆಶಿರ್ವದಿಸಿದಂತೆ ಈ ಕ್ಷೇತ್ರದ ಜನ ನನಗೆ ಆಶಿರ್ವದಿಸಿ ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಬಿಜೆಪಿ ಜಿಲ್ಲಾದ್ಯಕ್ಷ ಶಿವಾನಂದ ಮಂಠಾಳಕರ್, ಬೂಡಾ ಅಧ್ಯಕ್ಷ ಬಾಬುವಾಲಿ, ಮುಖಂಡರಾದ ಗುರುನಾಥ ಜ್ಯಾಂತಿಕರ್, ರೇವಣಸಿದ್ದಪ್ಪ ಜಲಾದೆ, ಗುರುನಾಥ ಕೊಳ್ಳುರ್, ಚಂದ್ರಶೇಖರ ಪಾಟೀಲ ಗಾದಗಿ, ಸೋಮನಾಥ ಪಾಟೀಲ ಸೇರಿದಂತೆ ಹಲವಾರು ನಾಯಕರು, ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದಲ್ಲಿದ್ದರು. ನಗರ ಸಭೆ ಸದಸ್ಯ ಶಶಿ ಹೊಸಳ್ಳಿ ಸ್ವಾಗತಿಸಿದರು.